ಬೆಂಗಳೂರು, ಡಿ.22- ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿರುವ ಬೆಂಗಳೂರು ನಗರ ಜಿಲ್ಲಾಡಳಿತ ಸುಮಾರು 8.50ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ.
ಯಲಹಂಕ ಸಮೀಪದ ಅಳಾಳಸಂದ್ರ ಗ್ರಾಮದ ಸರ್ವೆ ನಂ.62ರಲ್ಲಿ 2ಎಕರೆ 20 ಗುಂಟೆ ಸರ್ಕಾರಿ ಗುಂಡು ತೋಪು ಇದ್ದು, ಅದರಲ್ಲಿ ಎರಡು ಎಕರೆ ಏರ್ಪೆÇೀರ್ಟ್ ಮುಖ್ಯರಸ್ತೆಗೆ ಸ್ವಾಧೀನಗೊಂಡಿದೆ. ಉಳಿದ 20 ಗುಂಟೆಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡ ಬಾಲಕೃಷ್ಣ ಮತ್ತು ಆಂಜನಪ್ಪ ಎಂಬುವರು 10 ಗುಂಟೆಯಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಇನ್ನು 10 ಗುಂಟೆಯನ್ನು ವಾಹನದ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದರು.
ನಿರ್ಮಾಣಗೊಂಡ ವಾಣಿಜ್ಯ ಮಳಿಗೆಗಳಲ್ಲಿ ಡಾಬಾ, ಗ್ಯಾರೇಜ್, ಸ್ಟೇಷನರಿ ಸೇರಿದಂತೆ 8 ಮಳಿಗೆಗಳಿದ್ದು, ಪ್ರತಿ ಮಳಿಗೆಯಿಂದ ತಿಂಗಳಿಗೆ 15 ಸಾವಿರ ರೂ.ನಂತೆ ಸರಿಸುಮಾರು ಒಂದೂವರೆ ಲಕ್ಷ ಬಾಡಿಗೆ ಪಡೆಯುತ್ತಿದ್ದರು.
ಹಲವಾರು ಬಾರಿ ನೋಟಿಸ್ ನೀಡಿದರೂ ಒತ್ತುವರಿದಾರರು ಭೂಮಿ ತೆರವುಗೊಳಿಸದೇ ಇದ್ದುದ್ದರಿಂದ ಇಂದು ಬೆಳಗ್ಗೆ ಜೆಸಿಬಿ ಯಂತ್ರದೊಂದಿಗೆ ಸ್ಥಳಕ್ಕೆ ತೆರಳಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್ಶಂಕರ್, ಉಪವಿಭಾಗಾಧಿಕಾರಿ ನಾಗರಾಜ್, ತಹಸೀಲ್ದಾರ್ ಮಂಜುನಾಥ್ ಅವರು ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದ್ದು, ಇದು ಸರ್ಕಾರಿ ಜಮೀನು, ಅತಿಕ್ರಮಣ ಒತ್ತುವರಿದಾರರಿಗೆ ಶಿಕ್ಷಾರ್ಹ ಅಪರಾಧ ಎಂದು ನೋಟಿಸ್ ಬೋರ್ಡ್ ನೆಟ್ಟಿದ್ದಾರೆ.
ಇದೇ ವೇಳೆ ಇತರೆ ಭಾಗಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರು ಅತಿಕ್ರಮ ಒತ್ತುವರಿ ಕಂಡು ಹೌಹಾರಿದ್ದಾರೆ.
ಮತ್ತೊಂದು ಕಡೆ ಸ್ಥಳ ಪರಿಶೀಲನೆ ವೇಳೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮವಾಗಿ ಸರ್ಕಾರಿ ಭೂಮಿಯಲ್ಲಿ ಕಟ್ಟಡಗಳನ್ನು ನಿರ್ಮಿಸಿದ್ದು, ತಿಂಗಳಿಗೆ ಸರಿಸುಮಾರು ಐದು ಲಕ್ಷ ರೂ. ಬಾಡಿಗೆ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಮುಂದಿನ ವಾರ ಒತ್ತುವರಿ ಕಾರ್ಯಾಚರಣೆಯನ್ನು ಮುಂದುವರಿಸಿ ಸದರಿ ಭೂಮಿಯನ್ನು ವಶಪಡಿಸಿಕೊಳ್ಳುವುದಲ್ಲದೆ, ಸರ್ಕಾರದ ವಿವಿಧ ಉದ್ದೇಶಗಳಿಗೆ ಜಮೀನನ್ನು ಮೀಸಲಿಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.