ಮೈತ್ರಿ ಸರ್ಕಾರದ ಎರಡನೆ ಸಂಪುಟ ವಿಸ್ತರಣೆ ಇಂದು ನಡೆದಿದ್ದು ಎಂಟು ಮಂದಿ ಕಾಂಗ್ರೆಸಿನ ಶಾಸಕರಿಗೆ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರ

ಬೆಂಗಳೂರು, ಡಿ.೨೨- ಮೈತ್ರಿ ಸರ್ಕಾರದ ಎರಡನೆ ಸಂಪುಟ ವಿಸ್ತರಣೆ ಇಂದು ನಡೆದಿದ್ದು ಎಂಟು ಮಂದಿ ಕಾಂಗ್ರೆಸಿನ ಶಾಸಕರಿಗೆ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ಸಂಜೆ ೬.೩೦ ಕ್ಕೆ ಆರಂಭವಾದ ಸರಳ‌‌ ಸಮಾರಂಭದಲ್ಲಿ ರಾಜ್ಯಪಾಲ ವಜುಬಾಯಿ ವಾಲ ಅಧಿಕಾರ, ಗೌಪ್ಯತೆಯ ಪ್ರಮಾಣವಚನ‌ ಬೋಧಿಸಿದರು.

ಬಬಲೇಶ್ವರ ಕ್ಷೇತ್ರದ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ್ ಅವರು ದೇವರ ಹೆಸರಿನಲ್ಲಿ, ಯಮಕನಮರಡಿ ಕ್ಷೇತ್ರದ ಸತೀಶ್ ಜಾರಕಿಹೊಳಿ ಅವರು ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ, ಕುಂದಗೋಳಕ್ಷೇತ್ರದ ಶಾಸಕ ಸಿ.ಎಸ್.ಸಿವಳ್ಳಿ ಅವರು ಈಶ್ವರನ ಹೆಸರಿನಲ್ಲಿ, ಹೂವಿನ ಹಡಗಲಿ ಕ್ಷೇತ್ರದ ಪಿ.ಟಿ.ಪರಮೇಶ್ವರ್ ನಾಯಕ್ ತುಳಜಾಭವಾನಿ ಹೆಸರಿನಲ್ಲಿ, ಸಂಡೂರು ಕ್ಷೇತ್ರದ ಶಾಸಕ ಇ.ತುಕಾರಾಂ ಅವರು ದೇವರ ಹೆಸರಿನಲ್ಲಿ, ಬೀದರ್ ಕ್ಷೇತ್ರದ ರಹಿಂಖಾನ್ ಅಲ್ಲಾ ಹೆಸರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ, ಹೊಸಕೋಟೆ ಕ್ಷೇತ್ರದ ಶಾಸಕ‌ ಎಂ.ಟಿ.ಬಿ.ನಾಗರಾಜ್ ಮಂಜುನಾಥ ಸ್ವಾಮಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನ‌ ಸ್ವೀಕಾರ ಸಮಾರಂಭದ ನಂತರ ನೂತನ‌‌‌ ಸಚಿವರ ಜೊತೆ ರಾಜ್ಯಪಾಲರು, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸಾಮೂಹಿಕವಾಗಿ ಫೋಟೋ ಸೆಷನ್ ನಡೆಸಿದರು.

15 ನಿಮಿಷಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಸಚಿವರು, ಗಣ್ಯರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ