ಸಚಿವ ಸಂಪುಟ ಹಿನ್ನಲೆ ಜೆಡಿಎಸ್ ನಲ್ಲಿ ನಿರಾಸೆಯ ಕಾರ್ಮೋಡ

ಬೆಂಗಳೂರು, ಡಿ.22- ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ, ಸಂಸದೀಯ ಕಾರ್ಯದರ್ಶಿಗಳ ನೇಮಕದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದರೆ, ಜೆಡಿಎಸ್‍ನಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.
ಸಂಪುಟದಲ್ಲಿ ಖಾಲಿ ಇದ್ದ ಕಾಂಗ್ರೆಸ್ ಪಾಲಿನ ಆರೂ ಸ್ಥಾನಗಳನ್ನು ಭರ್ತಿ ಮಾಡಿರುವುದರ ಜತೆಗೆ ಇಬ್ಬರನ್ನು ಕೈಬಿಟ್ಟು ಬೇರೆ ಇಬ್ಬರಿಗೆ ಅವಕಾಶ ಕಲ್ಪಿಸಿರುವುದೂ ಸೇರಿದಂತೆ ಎಂಟು ಮಂದಿ ಸಚಿವರು ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಲ್ಲದೆ, 18 ಮಂದಿ ಶಾಸಕರಿಗೆ ಕಾಂಗ್ರೆಸ್‍ನಿಂದ ನಿಗಮ-ಮಂಡಳಿಗಳ ಅಧ್ಯಕ್ಷರಾಗಿ ನೇಮಕ ಮಾಡಿರುವ ಪಟ್ಟಿ ಪ್ರಕಟಗೊಂಡಿದೆ. ಎಂಟು ಮಂದಿ ಸಂಸದೀಯ ಕಾರ್ಯದರ್ಶಿಗಳನ್ನು ಕೂಡ ನೇಮಕ ಮಾಡಲಾಗಿದೆ. ದೆಹಲಿ ವಿಶೇಷ ಪ್ರತಿನಿಧಿ ಹಾಗೂ ರಾಜಕೀಯ ಕಾರ್ಯದರ್ಶಿಗಳನ್ನೂ ನೇಮಕ ಮಾಡಲಾಗಿದೆ. ಆದರೆ, ಜೆಡಿಎಸ್‍ನಲ್ಲಿ ಖಾಲಿ ಇದ್ದ ಎರಡು ಸಚಿವ ಸ್ಥಾನ, ನಿಗಮ-ಮಂಡಳಿಯ 10 ಸ್ಥಾನ, ಸಂಸದೀಯ ಕಾರ್ಯದರ್ಶಿಗಳ 4 ಹುದ್ದೆ ನೇಮಕ ಮಾಡಬೇಕಿತ್ತು. ಆದರೆ, ಸದ್ಯ ಪಕ್ಷದ ಪಾಳಯದಲ್ಲಿ ಅಂತಹ ಯಾವ ಲಕ್ಷಣಗಳೂ ಕಾಣುತ್ತಿಲ್ಲ.

ಶೂನ್ಯಮಾಸದ ನೆಪದ ಹಿನ್ನೆಲೆಯಲ್ಲಿ ಜೆಡಿಎಸ್ ಸಚಿವರ ನೇಮಕಾತಿಯನ್ನು ಸಂಕ್ರಾಂತಿವರೆಗೆ ಮುಂದೂಡಲು ನಿರ್ಧರಿಸಲಾಗಿದೆ. ಇದರಿಂದ ಸಚಿವಾಕಾಂಕ್ಷಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಸರ್ಕಾರದ ಆಡಳಿತ ಭಾಗವಾಗಿದ್ದರೂ, ಅಧಿಕಾರದ ಅವಕಾಶವಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ನಿಗದಿಯಾಗಿತ್ತು. ಅದರಂತೆ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ನೇಮಕ ಮಾಡಲಾಗಿದೆ. ಆದರೆ, ಜೆಡಿಎಸ್ ಇನ್ನೂ ಮೀನಾಮೇಷ ಎಣಿಸುತ್ತಿದೆ. ಸಂಪುಟದಲ್ಲಿ ಖಾಲಿ ಇರುವ ತನ್ನ ಪಾಲಿನ ಎರಡು ಸ್ಥಾನಗಳಿಗೆ ಯಾರನ್ನು ಭರ್ತಿ ಮಾಡಬೇಕೆಂದು ಇನ್ನೂ ನಿರ್ಧರಿಸಿಲ್ಲ.

10 ನಿಗಮ-ಮಂಡಳಿಗಳನ್ನು ಯಾವ ಶಾಸಕರಿಗೆ ನೀಡಬೇಕೆಂದು ತೀರ್ಮಾನಿಸಿಲ್ಲ. ಅದೇ ರೀತಿ ಸಂಸದೀಯ ಕಾರ್ಯದರ್ಶಿಗಳ ಹುದ್ದೆಯನ್ನು ಯಾರಿಗೆ ಕೊಡಬೇಕೆಂದು ಇನ್ನೂ ಚರ್ಚೆ ನಡೆದಿಲ್ಲ. ಹಾಗಾಗಿ ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿದೆ.
ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನ ಸಿಕ್ಕವರು ಸಂಭ್ರಮಪಟ್ಟರೆ, ಸಿಗದವರು ಅತೃಪ್ತಿ-ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಜೆಡಿಎಸ್‍ನಲ್ಲಿ ಇದಾವುದೂ ಇಲ್ಲದೆ ಮೌನಕ್ಕೆ ಶರಣಾಗಿದ್ದಾರೆ. ನಮ್ಮ ಪಕ್ಷದ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ