ಬೆಂಗಳೂರು, ಡಿ.22- ಇತ್ತ ಸಚಿವ ಸಂಪುಟ ಪುನಾರಚನೆಗೆ ವೇದಿಕೆ ಸಿದ್ಧಗೊಂಡಿರುವ ಬೆನ್ನಲ್ಲೇ ಅತ್ತ ಭಿನ್ನಮತೀಯ ಶಾಸಕರನ್ನು ಸೆಳೆಯಲು ಬಿಜೆಪಿ ಸದ್ದಿಲ್ಲದೆ ಆಪರೇಷನ್ ಕಮಲಕ್ಕೆ ಕೈ ಹಾಕಿದೆ.
ದೋಸ್ತಿ ಪಕ್ಷಗಳಲ್ಲಿ ಸಚಿವ ಸ್ಥಾನಸಿಗದೆ ಅಸಮಾಧಾನಗೊಂಡಿರುವ ಭಿನ್ನಮತೀಯ ಶಾಸಕರನ್ನು ಈಗಾಗಲೇ ಸಂಪರ್ಕ ಮಾಡಿರುವ ರಾಜ್ಯ ಬಿಜೆಪಿ ನಾಯಕರು, ಪಕ್ಷಕ್ಕೆ ಸೇರ್ಪಡೆಯಾಗುವವರಿಗೆ ಭರಪೂರ ಆಶ್ವಾಸನೆಗಳನ್ನು ನೀಡಿದ್ದಾರೆ.
ಬಹಿರಂಗವಾಗಿ ಆಪರೇಷನ್ ಕಮಲ ಎನ್ನದೆ ಸಚಿವ ಸ್ಥಾನ ಸಿಗದೆ ವಂಚಿತರಾಗಿ ಅಸಮಾಧಾನಗೊಂಡಿರುವ ಸುಮಾರು 10ರಿಂದ 12 ಶಾಸಕರನ್ನು ಕೂಡಲೇ ಪಕ್ಷಕ್ಕೆ ಸೆಳೆದು ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿಯದ್ದಾಗಿದೆ.
ಈಗಾಗಲೇ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿರುವ ರಮೇಶ್ಜಾರಕಿಹೊಳಿ, ಆರ್.ಶಂಕರ್ ಸೇರಿದಂತೆ ಪಕ್ಷೇತರ ಶಾಸಕ ಮುಳಬಾಗಿಲಿನ ನಾಗೇಂದ್ರ, ಭದ್ರಾವತಿಯ ಬಿ.ಕೆ.ಸಂಗಮೇಶ್, ಹಿರೇಕೆರೂರಿನ ಬಿ.ಸಿ.ಪಾಟೀಲ್, ವಿಜಯನಗರದ ಆನಂದ್ಸಿಂಗ್, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಿ.ನಾಗೇಂದ್ರ, ಹಗರಿಬೊಮ್ಮನಹಳ್ಳಿಯ ಭೀಮಾನಾಯಕ್, ಮಸ್ಕಿಯ ಪ್ರತಾಪ್ಗೌಡ ಪಾಟೀಲ್, ಬೆಳಗಾವಿಯ ಮೂವರು ಶಾಸಕರು ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ.
ಸಂಪುಟ ಪುನಾರಚನೆಯಾಗುತ್ತಿದ್ದಂತೆ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಭುಗಿಲೇಳುವುದು ನಿಶ್ಚಿತ. ಕೆಲವು ಶಾಸಕರು ವರಿಷ್ಠರ ನಿರ್ಧಾರದಿಂದ ಈಗಾಗಲೇ ಬಹಿರಂಗವಾಗಿಯೇ ಕಿಡಿಕಾರಿದ್ದಾರೆ. ಮುಂದೆ ಇನ್ನೂ ಒಂದು ವರ್ಷ ತಮಗೆ ಸರ್ಕಾರದಲ್ಲಿ ಯಾವುದೇ ಸ್ಥಾನ ಮಾನ ಸಿಗುವುದಿಲ್ಲ ಎಂದು ಕಾತರಿಯಾಗಿರುವುದರಿಂದ ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎಂಬ ನಿರೀಕ್ಷೆ ಕಮಲ ನಾಯಕರದ್ದು.
ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿತ್ತು. ಮಧ್ಯ ಪ್ರದೇಶ, ರಾಜಸ್ತಾನ, ಛತ್ತೀಸ್ಗಢದಲ್ಲಿ ಅಧಿಕಾರ ಕಳೆದುಕೊಂಡಿದ್ದರಿಂದ ಮುಂದಿನ ಲೋಕಸಭೆ ಚುನಾವಣೆಗೆ ತನ್ನ ಕಾರ್ಯತಂತ್ರವನ್ನು ಬದಲಾಯಿಸಬೇಕಾಗಿದೆ.
ಒಂದೊಂದು ರಾಜ್ಯವು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕೆಂಬುದು ಕೇಂದ್ರ ಬಿಜೆಪಿ ವರಿಷ್ಠರಿಗೂ ಮನವರಿಕೆಯಾಗಿದೆ.
ಆಪರೇಷನ್ಗೆ ಗ್ರೀನ್ ಸಿಗ್ನಲ್:
ಕೇಂದ್ರ ಬಿಜೆಪಿ ವರಿಷ್ಠರು ಈವರೆಗೂ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಸ್ಥಿರಗೊಳಿಸುವ ಸ್ಥಳೀಯ ಬಿಜೆಪಿ ನಾಯಕರ ಪ್ರಯತ್ನಕ್ಕೆ ಬೆಂಬಲ ಸೂಚಿಸಿರಲಿಲ್ಲ. ಒಂದು ವೇಳೆ ಅಂತಹ ಪ್ರಯತ್ನ ನಡೆಸಿದರೆ ಪಂಚರಾಜ್ಯದ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಅನುಮಾನ ಕಾಡಿತ್ತು.
ಈಗ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಕರ್ನಾಟಕ ಅತಿ ಹೆಚ್ಚು ಸ್ಥಾನ ತಂದುಕೊಡುವ ರಾಜ್ಯಗಳಲ್ಲಿ ಒಂದಾಗಿದೆ. ಕಾಂಗ್ರೆಸ್-ಜೆಡಿಎಸ್ನಲ್ಲಿರುವ ಅತೃಪ್ತ ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚನೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ವರಿಷ್ಠರು ಅಸ್ತು ಎಂದಿದ್ದಾರೆ.
ಇದನ್ನೇ ಕಾಯುತ್ತಿರುವ ಬಿಜೆಪಿ ರಾಜ್ಯ ನಾಯಕರು ಭಿನ್ನಮತೀಯರನ್ನು ಕರೆತಂದು ಶತಾಯಗತಾಯ ಸರ್ಕಾರ ರಚಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಅಖಾಡಕ್ಕಿಳಿದ ಜನಾರ್ಧನರೆಡ್ಡಿ:
ಈ ಹಿಂದೆ ಹಲವು ಬಾರಿ ಆಪರೇಷನ್ ಕಮಲ ವಿಫಲವಾಗಿತ್ತು. ಪಕ್ಷದಲ್ಲಿರುವ ಕೆಲವರ ಚಿತಾವಣೆಯಿಂದಲೇ ಕಾರ್ಯತಂತ್ರ ಕೈ ಹಿಡಿದಿರಲಿಲ್ಲ. ಪಕ್ಷದಲ್ಲಿ ನಡೆದ ವಿದ್ಯಮಾನಗಳನ್ನು ಸರ್ಕಾರದ ಮುಖ್ಯಸ್ಥರೊಬ್ಬರೇ ಬಿಜೆಪಿ ನಾಯಕರಿಗೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಮಾಜಿ ಸಚಿವ ಜನಾರ್ಧನರೆಡ್ಡಿ ಆಪರೇಷನ್ ಕಮಲದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಕೆಲವು ಶಾಸಕರನ್ನು ಸಂಪರ್ಕ ಮಾಡಿರುವ ರೆಡ್ಡಿ ಈ ಬಾರಿ ಬಿಜೆಪಿಯಿಂದ ತಮಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುವ ಆಶ್ವಾಸನೆಯನ್ನು ಕೊಟ್ಟಿದ್ದಾರೆ.
ಉಪ ಚುನಾವಣೆ ನಡೆದರೆ ಸಂಪೂರ್ಣ ಖರ್ಚುವೆಚ್ಚ, ಸಚಿವ ಸ್ಥಾನ, ಪಕ್ಷದಲ್ಲಿ ಗೌರವದಿಂದ ನಡೆಸಿಕೊಳ್ಳುವುದೂ ಸೇರಿದಂತೆ ಹಲವು ರೀತಿಯ ಭರವಸೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ತಮ್ಮನ್ನು ಬಂಧಿಸಲು ಪೆÇಲೀಸರಿಗೆ ಸೂಚನೆ ಕೊಟ್ಟಿದ್ದೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಎಂದು ರೆಡ್ಡಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.
ತಪ್ಪು ಮಾಡದ ತಮ್ಮನ್ನು ಜೈಲಿಗೆ ಹಾಕಿಸಿದ ಈ ಇಬ್ಬರ ವಿರುದ್ಧ ಸೇಡು ತೀರಿಸಿಕೊಂಡು ಸರ್ಕಾರ ಅಸ್ಥಿರಗೊಳಿಸುವುದು ರೆಡ್ಡಿ ಲೆಕ್ಕಾಚಾರ. ದೋಸ್ತಿ ಪಕ್ಷಗಳಲ್ಲಿನ ಭಿನ್ನಮತ ಬಿಜೆಪಿಗೆ ವರವಾಗುತ್ತೋ ಇಲ್ಲ ತಿರುಗುಬಾಣವಾಗುತ್ತೋ ಎಂಬುದನ್ನು ಕಾದು ನೋಡಬೇಕು.