ನವದೆಹಲಿ: ನಾಳೆಗೆ ಸಂಪೂರ್ಣ ವಿಸ್ತರಣೆ ನಡೆಯುವುದು ಖಚಿತ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೇಳಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇಂದು ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ನಿವಾಸದಲ್ಲಿ ಸಂಜೆ 5ಗಂಟೆಗೆ ಸಭೆ ನಡೆಸಲಿದ್ದಾರೆ.
ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ್ ಜೊತೆ ಸಭೆ ನಡೆಸಲಿರುವ ರಾಹುಲ್ ಗಾಂಧಿ, ತಾವು ಮೊದಲೇ ಸೂಚಿಸಿದಂತೆ ನಾಯಕರು ಸಿದ್ಧಪಡಿಸಿರುವ ಸಚಿವಾಕಾಂಕ್ಷಿಗಳ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.
ಆಕಾಂಕ್ಷಿಗಳ ಪಟ್ಟಿ ಜೊತೆ ಬರಲು ರಾಜ್ಯ ನಾಯಕರಿಗೆ ರಾಹುಲ್ ಈಗಾಗಲೇ ಸೂಚನೆ ನೀಡಿದ್ದರು. ಅದರಂತೆ ನಾಯಕರು ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದಾರೆ. ಇಂದು ರಾಜ್ಯ ನಾಯಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಕೆ.ಸಿ. ವೇಣುಗೋಪಾಲ್ ನಿವಾಸದಲ್ಲಿ ಸಭೆ ನಡೆಯಲಿದೆ.
ಸಚಿವ ಸ್ಥಾನಕ್ಕಾಗಿ ಲಾಬಿ:
ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ಶುರುವಾಗಿದ್ದು, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ, ಅಹಮದ್ ಪಟೇಲ್ ಮೂಲಕ ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಉಳಿದಂತೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮೂಲಕ ಹೆಚ್.ಕೆ ಪಾಟೀಲ್ ಲಾಬಿ ನಡೆಸಿದ್ದಾರೆ. ಹೈದರಾಬಾದ್ ಕರ್ನಾಟಕ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಮೂಲಕ ರಹೀಂಖಾನ್ ತಮ್ಮ ಬೇಡಿಕೆಯಿಟ್ಟಿದ್ದಾರೆ.
ಸಿಎಂ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮೂಲಕ ಇ.ತುಕಾರಾಂ, ಡಿಸಿಎಂ ಪರಮೇಶ್ವರ್ ಮೂಲಕ ಎಸ್.ಟಿ. ಸೋಮಶೇಖರ್, ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್, ಗುಲಾಂ ನಬಿ ಆಜಾದ್ ಮೂಲಕ ಎಂ. ಕೃಷ್ಣಪ್ಪ, ಸೋನಿಯಾ ಗಾಂಧಿ, ಗುಲಾಂ ನಬಿ ಆಜಾದ್ ಮೂಲಕ ಎಂ.ಬಿ. ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಸಿ.ಎಸ್. ಶಿವಳ್ಳಿ, ಆರ್. ಧರ್ಮಸೇನಾ ಹಾಗೂ ಬಿ.ಸಿ ಪಾಟೀಲ್ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು, ತಮ್ಮ ತಂದೆ ಕೆ.ಹೆಚ್.ಮುನಿಯಪ್ಪರಿಂದಲೇ ರೂಪಾ ಶಶಿಧರ್ ಲಾಬಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.