ಬಿಬಿಎಂಪಿಗೆ ಬೆಂಗಳೂರು ಒನ್ ಕೇಂದ್ರದಿಂದ ಐದು ಕೋಟಿ ರೂ. ವರ್ಗಾವಣೆಯಾಗಿಲ್ಲ ಎಂದು ಆರೋಪ ಮಾಡಿದ ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ

ಬೆಂಗಳೂರು, ಡಿ.21- ಖಾತಾ ವರ್ಗಾವಣೆ, ನೋಂದಣಿ ಮತ್ತು ವಿಭಜನೆ ಸೇರಿದಂತೆ ಪಾಲಿಕೆಯ ವಿವಿಧ ಕೆಲಸ ಕಾರ್ಯಗಳಿಗೆ ನಾಗರಿಕರು ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಾವತಿಸಿರುವ ಸುಮಾರು 5 ಕೋಟಿ ರೂಪಾಯಿಗಳನ್ನು ಬಿಬಿಎಂಪಿ ಖಾತೆಗೆ ವರ್ಗಾವಣೆಯಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಗಂಭೀರ ಆರೋಪ ಮಾಡಿದರು.

ನಾಗರಿಕರು ಖಾತಾ, ವರ್ಗಾವಣೆ, ನೋಂದಣಿ ಮತ್ತಿತರ ಕಾರ್ಯಗಳಿಗೆ ಬೆಂಗಳೂರು ಒನ್‍ನಲ್ಲಿ ಪಾಲಿಕೆ ಅವಕಾಶ ಮಾಡಿಕೊಟ್ಟಿದೆ.ನೂರಾರು ಮಂದಿ ನಿಗದಿತ ಶುಲ್ಕ ಕಟ್ಟಿ ತಮ್ಮ ಕೆಲಸ ಕಾರ್ಯ ಮಾಡಿಕೊಂಡಿರುತ್ತಾರೆ.ಹೀಗೆ ಪಾವತಿಯಾದ ಶುಲ್ಕವನ್ನು ಬೆಂಗಳೂರು ಒನ್ ಕಚೇರಿಯವರು ಬಿಬಿಎಂಪಿ ಖಾತೆಗೆ ವರ್ಗಾವಣೆ ಮಾಡಬೇಕು.ಆದರೆ ಇದುವರೆಗೆ ಇಂತಹ ಪ್ರಕ್ರಿಯೆ ನಡೆದೇ ಇಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತಾಜಾ ಉದಾಹರಣೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸುಮಾರು 5 ಕೋಟಿ ರೂ.ಗಳನ್ನು ಬೆಂಗಳೂರು ಒನ್ ಕೇಂದ್ರದವರು ಬಿಬಿಎಂಪಿ ಖಾತೆಗೆ ವರ್ಗಾಯಿಸಬೇಕು.ನಾನೇ ಈ ಕುರಿತು ಪತ್ರ ಬರೆದರೂ ಕೂಡಾ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಧಿಕಾರಿಗಳು ಮಾತುಕತೆ ನಡೆಸಿ ಸಣ್ಣ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗಿಲ್ಲ. ಈ ಹಣವನ್ನು ವರ್ಗಾವಣೆ ಮಾಡಿಕೊಂಡು ಅಭಿವೃದ್ಧಿ ಕಾರ್ಯಕ್ಕೆ ಬಳಸಬೇಕು.ಈ ಹಣವನ್ನು ಅಧಿಕಾರಿಗಳು ವರ್ಗಾವಣೆ ಮಾಡಿಸಲಿಲ್ಲ ಎಂದಾದರೆ ಇನ್ನು ಕೋಟ್ಯಂತರ ರೂ.ವ್ಯವಹಾರವನ್ನು ಹೇಗೆ ನಿಭಾಯಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೆಂಗಳೂರು ಒನ್‍ನಿಂದ ಬರುವ ಹಣವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪದ್ಮನಾಭರೆಡ್ಡಿ ಒತ್ತಾಯಿಸಿದರು.

ಐದು ಕೋಟಿ ಬಾಕಿ ಇಲ್ಲ: ಬೆಂಗಳೂರು ಒನ್ ಕೇಂದ್ರಗಳಲ್ಲಿ ಕೋಟ್ಯಂತರ ರೂ. ಬಾಕಿ ಇರುವ ವಿಚಾರವನ್ನು ಅಲ್ಲಗಳೆದಿರುವ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ 5 ಕೋಟಿ ಹಣ ಬಾಕಿ ಇಲ್ಲ. ಅಂದಾಜು 75 ಲಕ್ಷ ಹಣ ಬರಬೇಕು.ಆ ಹಣವನ್ನು ಪಾಲಿಕೆ ಖಾತೆಗೆ ವರ್ಗಾವಣೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ