ವೈಟ್ ಟಾಫಿಂಗ್ ಕಾಮಗಾರಿಯನ್ನು ಬೇಗ ಮುಗಿಸುವಂತೆ ಸೂಚಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಬೆಂಗಳೂರು, ಡಿ.21-ನಗರದಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಜಾಮ್ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆಯೋ ಅದನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಮತ್ತಿತರ ಅಧಿಕಾರಿಗಳೊಂದಿಗೆ ಪಾಲಿಕೆಯಲ್ಲಿ ಮಂಜುನಾಥ್ ಪ್ರಸಾದ್ ಸಭೆ ನಡೆಸಿ ವೈಟ್ ಟಾಪಿಂಗ್ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ

ಸಭೆ ನಂತರ ಮಾತನಾಡಿದ ಮಂಜುನಾಥ್‍ಪ್ರಸಾದ್, ಕೆಲವೆಡೆ ವೈಟ್ ಟಾಪಿಂಗ್ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದನ್ನರಿತು ಕಾಮಗಾರಿ ತ್ವರಿತ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕಾಮಗಾರಿಗೆ ಎಂ40 ಕಾಂಕ್ರೀಟ್ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಮತ್ತೆ 28 ಕಡೆ ಹೊಸದಾಗಿ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತದೆ. ಇದು ಫೆಬ್ರವರಿಯಿಂದ ಫ್ರಾರಂಭವಾಗಲಿದೆ. ಹೊಸ ಫೇವರ್ಸ್ ಹಾಕಲು ಗುತ್ತಿಗೆದಾರರಿಗೆ ಆದೇಶಿಸಲಾಗಿದೆ. ಸರ್ವೀಸ್ ರಸ್ತೆ ಇಲ್ಲದ ಕಡೆ ಸರ್ವೀಸ್ ರಸ್ತೆಗಳನ್ನು ಮಾಡಿಕೊಂಡು ಮುಖ್ಯರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಲಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್‍ಮಾತನಾಡಿ, ಎಲ್ಲೆಲ್ಲಿ ಸರ್ವೀಸ್ ರಸ್ತೆಗಳಿಲ್ಲವೋ ಅಲ್ಲಿ ಸರ್ವೀಸ್ ರಸ್ತೆ ಮಾಡಲು ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.

ವೈಟ್ ಟಾಪಿಂಗ್ ಕಾಮಗಾರಿಯಿಂದ ಕೆಲಸಮಯ ಸಮಸ್ಯೆಯಾಗಬಹುದು.ಆದರೆ ಒಂದೆರಡು ತಿಂಗಳ ಬಳಿಕ ಇದು ಸರಿಯಾಗಲಿದೆ.ಎಲ್ಲೆಲ್ಲಿ ಕಾಮಗಾರಿ ನಡೆಯುತ್ತಿದೆಯೋ ಆ ಸ್ಥಳಗಳಲ್ಲಿ ಸಂಚರಿಸುವ ಜನರು ಬೇಗ ಮನೆ ಬಿಡುವುದು ಒಳಿತು ಎಂದು ಅವರು ಸಲಹೆ ನೀಡಿದರು.

ಈ ಬಗ್ಗೆ ರೇಡಿಯೋ, ಟಿವಿ, ಟ್ವೀಟರ್ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹರಿಶೇಖರನ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ