15 ಭಕ್ತರ ಸಾವು, 62 ಸಿಬ್ಬಂದಿ, ನಾಲ್ಕೂವರೆ ದಿನ… ವಿಷ ಪ್ರಸಾದ ತನಿಖೆಯಲ್ಲಿ ಸುಳಿವು ಸಿಕ್ಕಿದ್ದು ಎಲ್ಲಿ?

ಚಾಮರಾಜನಗರ: ಪ್ರಸಾದಕ್ಕೆ ಕೀಟನಾಶಕ ಬೆರೆಸಿ 15 ಮಂದಿ ಸಾವಿಗೆ ಕಾರಣರಾದ ಆರೋಪಿಗಳನ್ನು ಹಿಡಿಯಲು ಐಜಿಪಿ ನೇತೃತದ 62 ಮಂದಿ ತಂಡ ನಾಲ್ಕುವರೆ ದಿನದಲ್ಲಿ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದ ನೇತೃತ್ವ ವಹಿಸಿಕೊಂಡ ಐಜಿಪಿ ಶರತ್ ಚಂದ್ರ ಮತ್ತು ಎಸ್ ಪಿ ಧರ್ಮೇಂದ್ರಕುಮಾರ್ ಮೀನಾ ಅವರು ಪ್ರಕರಣದ ತನಿಖೆಯ ವಿವಿಧ ಹಂತಗಳ ಮಾಹಿತಿಯನ್ನು ನೀಡಿದ್ದಾರೆ.

ಹಂತ-1: ಬಾಣಸಿಗರು ಮತ್ತು ಟ್ರಸ್ಟ್ ಕಾರ್ಯದರ್ಶಿ ಚಿನ್ನಪ್ಪಿ, ಮ್ಯಾನೇಜರ್ ಮಾದೇಶನನ್ನು ಶುಕ್ರವಾರ ವಶಕ್ಕೆ ಪಡೆದ ಪೊಲೀಸರು ಪ್ರಥಮ ಹಂತದ ವಿಚಾರಣೆಯಲ್ಲಿ‌ ಯಾವುದೇ ಬೆಳವಣಿಗೆಯೂ ಕಾಣದೇ ಕಗ್ಗಂಟಾದಾಗ ಸಾಲೂರು ಮಠದ ಕಿರಿಯಶ್ರೀ ವಿಚಾರಣೆಗೊಳಪಡಿಸಿದ್ದರು. ಆ ವೇಳೆ, ಅವರು ಟ್ರಸ್ಟ್‌ ವಿರುದ್ಧ ಕಿಡಿಕಾರಿದ್ದ ರೀತಿ ಮತ್ತು ಚಿನ್ನಪ್ಪಿ ಮೇಲೆ ಸಾಧಿಸುತ್ತಿದ್ದ ಹಗೆ ಅವರ ಮಾತಿನಿಂದ ತಿಳಿದುಬಂತು. ಮಾದೇಶ್ ಮತ್ತು ಚಿನ್ನಪ್ಪಿಯ ತೀವ್ರ ವಿಚಾರಣೆಯಿಂದ ದೇಗುಲದಲ್ಲಿನ ಒಳಜಗಳದ ಹೊರಗೆ ಬಂತು.

ಹಂತ-2 : ಗೋಪುರ ನಿರ್ಮಾಣದ ನಡುವೆ ಎದ್ದ ಜಗಳ ಮತ್ತು ಚಿನ್ನಪ್ಪಿ ಮತ್ತು ಸ್ವಾಮೀಜಿ ನಡುವೆ ನಡೆಯುತ್ತಿದ್ದ‌ ಮುಸುಕಿನ ಗುದ್ದಾಟ, ಇಮ್ಮಡಿ ಮಹದೇವ ಸ್ವಾಮಿಯನ್ನು ಬಿಟ್ಟು ಗೋಪುರ ನಿರ್ಮಾಣಕ್ಕೆ ಚಿನ್ನಪ್ಪಿ ಮುಂದಾದದ್ದು ವಿಚಾರಣೆಯಲ್ಲಿ ಗೊತ್ತಾಯಿತು. ಮಾದೇಶ್ ಗುಟ್ಟು ಬಿಟ್ಟುಕೊಡದಿದ್ದರೂ ಸ್ವಾಮೀಜಿಯೊಂದಿಗೆ ಅಂಬಿಕಾಳಿಗಿದ್ದ ಅನೈತಿಕ ಸಂಬಂಧ ಬೆಳಕಿಗೆ ಬಂತು. ಇದೇ ವೇಳೆ ಅಂಬಿಕಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸುವಷ್ಟರಲ್ಲಿ ಎಫ್​​ಎಸ್​​ಎಲ್​​​ನಿಂದ ಆಹಾರಕ್ಕೆ ಕ್ರಿಮಿನಾಶಕ ಸೇರಿಸಿರುವುದು ದೃಢವಾಯಿತು.

ಹಂತ-3 : ವಿಚಾರಣೆಗೊಳಪಟ್ಟ ಮಾರನೇ ದಿನವೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಸ್ವಾಮೀಜಿ ನಡೆ ಕುರಿತು ಪೊಲೀಸರು ನಿಗಾ ಇಟ್ಟಿದ್ದರು. ಅಂಬಿಕಾಳನ್ನು 2 ದಿನ ತೀವ್ರ ವಿಚಾರಣೆಗೊಳಪಡಿಸಿದಾಗ ಪ್ರಕರಣದ ಕಿಂಗ್ ಪಿನ್ನಾಗಿದ್ದ ಸ್ವಾಮೀಜಿ ಮತ್ತು ಸೂತ್ರಧಾರರು ತಾನು ಮತ್ತು ತನ್ನ ಗಂಡನೆಂದು ಬಾಯ್ಬಿಟ್ಟಳು. ಆಸ್ಪತ್ರೆಯಿಂದ ಹಿಂತಿರುಗುತ್ತಿದ್ದಂತೆ ಸ್ವಾಮೀಜಿಯನ್ನು ವಶಕ್ಕೆ ಪಡೆದ ಪೊಲೀಸರು ಮತ್ತೊಂದೆಡೆ ಅಸ್ವಸ್ಥನಂತೆ ನಾಟಕವಾಡಿ ಆಸ್ಪತ್ರೆ ಸೇರಿದ್ದ ದೊಡ್ಡಯ್ಯನ ಜನ್ಮ ಜಾಲಾಡಿದಾಗ ಪ್ರಕರಣದ ತನಿಖೆ ಒಂದು ಹಂತದ ಮುಕ್ತಾಯ ಖಂಡಿದೆ.

22 ಮಂದಿ ಅಧಿಕಾರಿಗಳು, 62 ಸಿಬ್ಬಂದಿ ಇಂಚಿಂಚು ಮಾಹಿತಿಯನ್ನು ಕಲೆಹಾಕಿ ತನಿಖೆಯಲ್ಲಿ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದರು. ಸಾಲೂರು ಕಿರಿಯಶ್ರೀ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದಿದ್ದರಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ ತನಿಖೆ ನಡೆಸಿದ 62 ಮಂದಿಯ ಪೊಲೀಸ್ ತಂಡಕ್ಕೆ ಬಹುಮಾನ ಘೋಷಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ