ಬಿಜೆಪಿ ನಾಯಕರ ಔತಣ ಕೂಟದಲ್ಲಿ ಸಚಿವರು ಭಾಗವಹಿಸಿದ್ದು ತಪ್ಪಲ್ಲ : ಸಚಿವ ದೇಶಪಾಂಡೆ

ಬೆಳಗಾವಿ, ಡಿ.20-ಪ್ರತಿ ಪಕ್ಷದ ಬಿಜೆಪಿ ನಾಯಕರು ನಡೆಸಿದ ಔತಣ ಕೂಟದಲ್ಲಿ ಆಡಳಿತ ಪಕ್ಷದ ನಾಯಕರು ಭಾಗವಹಿಸಿರುವ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಕಂದಾಯ ಸಚಿವ ಆರ್.ವಿದೇಶಪಾಂಡೆ ಹೇಳಿದ್ದಾರೆ.

ಸುವರ್ಣಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಔತಣ ಕೂಟದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಚಿವೆ ಜಯಮಾಲಾ ಭಾಗವಹಿಸಿರುವುದು ತಪ್ಪಲ್ಲ. ಮದುವೆ, ಮುಂಜಿ ಎಂದು ಊಟಕ್ಕೆ ಕರೆದರೆ ಹೋಗಬಾರದು ಎಂದೇನೂ ಇಲ್ಲ. ಬಿಜೆಪಿ ನಾಯಕರು ನಮ್ಮನ್ನೂ ಊಟಕ್ಕೆ ಕರೆದಿದ್ದರು. ಸಮಯದ ಕೊರತೆಯಿಂದ ನಾನು ಹೋಗಿಲ್ಲ. ಯಾರಾದರೂ ಊಟಕ್ಕೆ ಕರೆದಾಗ ಹೋಗುವುದು ನಮ್ಮ ಸಂಸ್ಕøತಿ.ಸರ್ವೇ ಜನೋ ಸುಖಿನೋ ಭವಂತು ಎಂಬುದು ನಮ್ಮ ಆಚಾರ. ಊಟ, ತಿಂಡಿಗೆ ಹೋದರು ಎಂಬ ಕಾರಣಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ನಡೆಸಿದ ಔತಣ ಕೂಟದಲ್ಲಿ ಬಿಜೆಪಿ ಶಾಸಕರು ಭಾಗವಹಿಸದೆ ಇರುವ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿ ನಾಯಕರನ್ನೇ ಕೇಳಿದರೆ ಯೋಗ್ಯ ಉತ್ತರ ಸಿಗಬಹುದು ಎಂದು ಪ್ರತಿಕ್ರಿಯಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಜಯಮಾಲಾ ಅವರು, ಬಿಜೆಪಿಯ ಸ್ನೇಹಿತರು ಕರೆದಿದ್ದರು ಎಂಬ ಕಾರಣಕ್ಕಾಗಿ ಊಟಕ್ಕೆ ಹೋಗಿದ್ವಿ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವುದು ಬೇಡ.ಈಗಾಗಲೇ ಹಿರಿಯರಾದ ದೇಶಪಾಂಡೆ ಅವರು ಎಲ್ಲಾ ಹೇಳಿದ್ದಾರೆ. ಅದನ್ನು ಮೀರಿ ನಾನು ಇನ್ನೇನು ಪ್ರತಿಕ್ರಿಯೆ ನೀಡಲು ಸಾಧ್ಯ. ಊಟ ಹಾಕುತ್ತೇವೆ ಎಂದಾಗ, ಹೋಗದೆ ಇರಲು ಹೇಗೆ ಸಾಧ್ಯ, ನಿಮ್ಮನ್ನು ಕರೆದರೆ ನೀವೂ ಹೋಗುತ್ತೀರಿ, ಅದೇ ರೀತಿ ನಾನು ಹೋಗಿದ್ದೇನೆ ಎಂದು ಪ್ರತಿಕ್ರಿಯಿಸಿದರು.

ಈ ರೀತಿ ತಪ್ಪು ಅರ್ಥ ಕಲ್ಪಿಸುವುದಾದರೆ ಇನ್ನು ಮುಂದೆ ಹೋಗಲ್ಲ. ಇನ್ನು ಮುಂದೆ ಊಟಕ್ಕೆ ಕರೆದರೆ ನಾನು ಬರಲ್ಲ ಎಂದು ಹೇಳುತ್ತೇನೆ ಎಂದು ನಗೆಚಟಾಕಿ ಹಾರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ