ಬೆಳಗಾವಿ,ಡಿ.20 -ತಲಾಕ್ ತಲಾಕ್ ತಲಾಕ್ ರೀತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶೀಘ್ರದಲ್ಲೇ ಸೋಡ ಚೀಟಿ ನೀಡಲಿದೆ ಎಂದು ಬಿಜೆಪಿ ಮುಖಂಡ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.
ಕುಮಾರಸ್ವಾಮಿ ಅವರಿಗೆ ಅತಿ ಶೀಘ್ರದಲ್ಲಿ ಕಾಂಗ್ರೆಸ್ ತಲಾಕ್ ಕೊಡುವುದರಲ್ಲಿ ಯಾವ ಸಂದೇಹವೂ ಇಲ್ಲ. ಸೋಡ ಚೀಟಿ ಪಡೆಯಲು ಸಿಎಂ ತಯಾರಾಗಬೇಕೆಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮುಖ್ಯಮಂತ್ರಿ ಇರುವಾಗಲೇ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕೆಂದು ಹೇಳಿರುವುದು ದೋಸ್ತಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ರುಜುವಾತು ಮಾಡಿದೆ. ಯಾವುದೇ ಸಂದರ್ಭದಲ್ಲಿ ಸರ್ಕಾರ ಬಿದ್ದರೆ ಅದಕ್ಕೆ ನಾವು ಕಾರಣಕರ್ತರಲ್ಲ ಎಂದರು.
ಸರ್ಕಾರ ರಚನೆಯಾದ ದಿನದಿಂದಲೂ ಅಸ್ಥಿರತೆ ಎದ್ದು ಕಾಣುತ್ತಿದ್ದು, ಸಮನ್ವಯತೆ ಕೊರತೆ ಕಾಣುತ್ತಿದೆ. ಪರಸ್ಪರ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಕೇವಲ ತೋರ್ಪಡಿಕೆಗೆ ನಾವು ಒಂದಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಮೈತ್ರಿ ಸರ್ಕಾರ ಶೀಘ್ರ ಪತನವಾಗುವುದರಲ್ಲಿ ಸಂದೇಹವಿಲ್ಲ ಎಂದು ಪುನರುಚ್ಚರಿಸಿದರು.
ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ಬಿಜೆಪಿಯ ಔತಣಕೂಟಕ್ಕೆ ಯಾವ ಕಾರಣಕ್ಕಾಗಿ ಬಂದಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ನಡುವಿನ ಸಂಬಂಧ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.
ರಮೇಶ್ ಜಾರಕಿಹೊಳಿ ನಮ್ಮ ಔತಣಕೂಟಕ್ಕೆ ಪ್ರೀತಿಯಿಂದ ಬಂದಿರಬಹುದು. ಬೆಳಗಾವಿಯನ್ನು ಎರಡು ಭಾಗ ಮಾಡಿದ ಡಿ.ಕೆ.ಶಿವಕುಮಾರ್ ಅವರ ಔತಣಕೂಟಕ್ಕೆ ಜಾರಕಿಹೊಳಿ ಹೋಗಲು ಇಷ್ಟ ಇಲ್ಲದಿರಬಹುದು. ಬೆಳಗಾವಿಯಲ್ಲಿ ನಾವು ಇದ್ದೇವೆ ಎಂಬ ಕಾರಣಕ್ಕೆ ಬಂದಿರಲೂಬಹುದು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.
ರಮೇಶ್ ಜಾರಕಿಹೊಳಿ ಅವರ ತೀರ್ಮಾನದ ಬಗ್ಗೆ ನಮಗೆ ಗೊತ್ತಿಲ್ಲ. ಪ್ರೀತಿ ವಿಶ್ವಾಸದಿಂದ ನಮ್ಮ ಔತಣಕೂಟಕ್ಕೆ ಬಂದಿರಬಹುದು. ನಾವು ಯಾವುದೇ ಆಪರೇಷನ್ ಕಮಲ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಪರಿಷತ್ ಪ್ರತಿಪಕ್ಷದ ನಾಯಕರ ನೇತೃತ್ವದಲ್ಲಿ ಸಿಎಜೆ ವರದಿಯನ್ನು ಕೊಟ್ಟಿದ್ದಾರೆ. ಇದನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.