ಬೆಳಗಾವಿ, ಡಿ.20- ರಾಜ್ಯ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‍ರಚನೆಗೆ ತಯಾರಿಗಳು ಆರಂಭಗೊಂಡಿವೆ. ಆದರೂ ದಿನಾಂಕದ ಬಗ್ಗೆ ಈವರೆಗೂ ಒಂದಲ್ಲಾ ಒಂದು ಗೊಂದಲಗಳು ಸೃಷ್ಟಿಯಾಗುತ್ತಲೇ ಇವೆ.
ಇದೇ 22ರಂದು ಸಂಜೆ 5.27ಕ್ಕೆ ನಿಗದಿಯಾಗಿರುವ ಮುರ್ಹೂತದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ.ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಹಲವಾರು ಬಾರಿ ಈ ಮುರ್ಹೂತವನ್ನು ಖಚಿತ ಪಡಿಸಿದ್ದಾರೆ.ಆದರೆ, ಅದರ ಹೊರತಾಗಿ ಹೊಸ ಬೆಳವಣಿಗೆಯಲ್ಲಿ ಸಂಪುಟ ವಿಸ್ತರಣೆ ತಿಂಗಳಾಂತ್ಯದಲ್ಲಿ ನಡೆಯುವ ಸಾಧ್ಯತೆ ಇದ್ದು, ಬಹುತೇಕ ಡಿ.29ಕ್ಕೆ ಮುರ್ಹೂತ ನಿಗದಿಯಾಗಬಹುದು ಎನ್ನಲಾಗುತ್ತಿದೆ.
ಸಂಪುಟ ವಿಸ್ತರಣೆ, ಪುನರ್ ರಚನೆ, ನಿಗಮ ಮಂಡಳಿ ನೇಮಕಾತಿ, ಸಂಸದೀಯ ಕಾರ್ಯದರ್ಶಿಗಳ ನೇಮಕ ಸೇರಿದಂತೆ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಈಗಾಗಲೇ ದೆಹಲ್ಲಿಯಲ್ಲಿದ್ದಾರೆ.ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸಿಮ್ಲಾ ಪ್ರವಾಸದಲ್ಲಿದ್ದು, ಇಂದು ಸಂಜೆ ವಾಪಸ್ ಬರಲಿದ್ದಾರೆ.ರಾಜ್ಯದಿಂದ ತೆರಳಿರುವ ನಾಯಕರು ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ನಾಳೆ ಪೂರ್ವ ಭಾವಿ ಚರ್ಚೆ ನಡೆಸಲಿದ್ದಾರೆ.
ನಂತರ ಎಐಸಿಸಿ ಪ್ರಧಾನಕಾರ್ಯದರ್ಶಿ ಅಹಮ್ಮದ್‍ಪಟೇಲ್, ಹಿರಿಯ ನಾಯಕರಾದ ಗುಲಾಂನಭಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಕೆ.ಎಚ್.ಮುನಿಯಪ್ಪ ಅವರ ಜತೆ ದೆಹಲಿಯಲ್ಲಿ ಸಭೆ ನಡೆಯಲಿದೆ.
ರಾಜ್ಯ ನಾಯಕರು ಈಗಾಗಲೇ ಸುಮಾರು 10 ಮಂದಿ ಆಕಾಂಕ್ಷಿಗಳು ಮತ್ತು ಸಂಭವನೀಯ ಸಚಿವರ ಪಟ್ಟಿ ಸಿದ್ದಪಡಿಸಿಕೊಂಡಿದ್ದು, ಅದನ್ನು ತೆಗೆದುಕೊಂಡು ಹೋಗಲಿದ್ದಾರೆ. ಜತೆಗೆ ಸಂಪುಟ ಪುನರ್‍ರಚನೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದೇ ಆದರೆ, ಯಾರನ್ನು ಕೈ ಬಿಡಬಹುದು, ಆ ಸ್ಥಾನಕ್ಕೆ ಯಾರನ್ನು ನೇಮಿಸಬಹುದು, ಯಾರ ಖಾತೆಗಳನ್ನು ಬದಲಾವಣೆ ಮಾಡಬಹುದು ಎಂಬೆಲ್ಲಾ ಪಟ್ಟಿಯೂ ಕೂಡ ಸಿದ್ದಗೊಂಡಿದೆ.
ಆದರೆ, ಹೈಕಮಾಂಡ್ ರಾಜ್ಯ ನಾಯಕರು ನಿಗದಿ ಪಡಿಸಿರುವ ಮುಹೂರ್ತದಲ್ಲೇ ಸಂಪುಟ ವಿಸ್ತರಣೆಗೆ ಸಮ್ಮತ್ತಿಸುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಒಂದು ವೇಳೆ ರಾಜ್ಯ ನಾಯಕರ ಪಟ್ಟಿಯನ್ನು ಪಡೆದು ಅದನ್ನು ಪರಿಶೀಲಿಸಿದ ನಂತರ ತಮ್ಮ ನಿರ್ಧಾರ ಹೇಳುವುದಾಗಿ ಹೈಕಮಾಂಡ್ ನಾಯಕರು ತಿಳಿಸಿದರೆ ಸಂಪುಟ ವಿಸ್ತರಣೆ ಇನ್ನೂ ಒಂದು ವಾರ ಕಾಲ ಮುಂದೂಡಿಕೆಯಾಗುವ ಸಾಧ್ಯತೆ ಇದ್ದು.ಡಿ.29ಕ್ಕೆ ಮರು ಮುಹೂರ್ತ ನಿಗದಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಸಂಭವನೀಯ ಪಟ್ಟಿಯಲ್ಲಿ ಬಿ.ಕೆ.ಸಂಗಮೇಶ್, ಎಸ್.ಆರ್.ಪಾಟೀಲ್, ಬಿ.ಸಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಇ.ತುಖಾರಾಮ್, ಸತೀಶ್ ಜಾರಕಿಹೊಳಿ, ನಾಗೇಂದ್ರ, ರೂಪಾಶಶಿಧರ್, ಧರ್ಮಸೇನಾ, ಆರ್.ಬಿ.ತಿಮ್ಮಾಪುರ್, ರಹೀಮ್‍ಖಾನ್, ತನ್ವೀಸೇಠ್, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್ ಸೇರಿದಂತೆ ಹಲವು ಮಂದಿ ಶಾಸಕರ ಹೆಸರಿವೆ.
ಇನ್ನು ಸಂಪುಟದಿಂದ ಕೈ ಬಿಡುವವರ ಪಟ್ಟಿಯಲ್ಲಿ ರಮೇಶ್ ಜಾರಕಿಹೊಳಿ, ಆರ್.ಶಂಕರ್, ವೆಂಕಟರಮಣಪ್ಪ, ಜಯಮಾಲಾ ಸೇರಿದಂತೆ ಹಲವರ ಹೆಸರುಗಳಿವೆ.
ಖಾತೆ ಬದಲಾವಣೆ ವಿಷಯದಲ್ಲೂ ಸಾಕಷ್ಟು ಚರ್ಚೆಗಳು ನಡೆದಿದ್ದು, ಕೆಲವು ಸಚಿವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸದ ಹಿನ್ನೆಲೆಯಲ್ಲಿ ಖಾತೆ ಬದಲಾವಣೆ ಅನಿವಾರ್ಯ ಎಂಬ ಚರ್ಚೆಗಳು ನಡೆಯುತ್ತಿವೆ.
ಒಂದು ವೇಳೆ ಅಂದುಕೊಂಡಂತೆ ಸಂಪುಟ ವಿಸ್ತರಣೆ ಅಥವಾ ಪುನರ್‍ರಚನೆ ಮಾಡಿ ಭಿನ್ನಮತೀಯ ಚಟುವಟಿಕೆಗಳನ್ನು ನಿಭಾಯಿಸಿ ಸರ್ಕಾರವನ್ನು ಸುಸ್ಥಿರವಾಗಿ ಉಳಿಸಿದರೆ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುವರು.
ಪಂಚ ರಾಜ್ಯ ಚುನಾವಣೆ ಗೆಲುವಿನಲ್ಲಿ ಬೀಗುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ರಾಜ್ಯ ಸಂಪುಟ ವಿಸ್ತರಣೆಯಲ್ಲಿ ಹಸ್ತಕ್ಷೇಪ ನಡೆಸುತ್ತದೆ ಎಂಬ ಮಾತುಗಳಿವೆ. ಈ ಮೊದಲೆಲ್ಲಾ ಸಿದ್ದರಾಮಯ್ಯ ಮತ್ತು ರಾಜ್ಯ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತಿತ್ತು.ಆದರೆ, ಈ ಹೊಸ ಬೆಳವಣಿಗೆಯಲ್ಲಿ ಪ್ರತಿಯೊಂದು ನಿರ್ಧಾರಕ್ಕೂ ಮುನ್ನ ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರ ಮಾರ್ಗದರ್ಶನ ಪಡೆದುಕೊಳ್ಳುವಂತೆ ಹೈಕಮಾಂಡ್ ಸೂಚನೆ ನೀಡಿದೆ.ಇದು ರಾಜ್ಯದ ಕೆಲವು ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸಚಿವ ಸಂಪುಟ ಪುನರ್‍ರಚನೆ ಬೆಳವಣಿಗೆಗಳು ರಾಜ್ಯ ರಾಜಕಾರಣದ ದಿಕ್ಕನ್ನು ಯಾವ ಕಡೆ ಕೊಂಡೊಯ್ಯುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.