ಮಾಜಿ ಸಿ.ಎಂ.ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯ

ಬೆಳಗಾವಿ,ಡಿ.20-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ನಡೆದಿದೆ ಎನ್ನಲಾದ ಸುಮಾರು 35 ಸಾವಿರ ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲೇಖಪಾಲರ ವರದಿ(ಸಿಎಜಿ) ವರದಿಯನ್ನು ಇಂದು ಬಿಜೆಪಿ ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷರಾಗಿರುವ ಆರ್.ಅಶೋಕ್ ಅವರಿಗೆ ಹಸ್ತಾಂತರ ಮಾಡಲಾಯಿತು.

ಬೆಳಗಾವಿಯ ಖಾಸಗಿ ಹೋಟೆಲ್‍ನಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಸದಸ್ಯರಾದ ಎನ್.ರವಿಕುಮಾರ್ ಸೇರಿದಂತೆ ಮತ್ತಿತರರು ವರದಿಯ ಪ್ರತಿಯನ್ನು ಹಸ್ತಾಂತರಿಸಿದರು.

ಸಿದ್ದರಾಮಯ್ಯನವರ ಐದು ವರ್ಷಗಳ ಆಡಳಿತಾವಧಿಯಲ್ಲಿ ಖರ್ಚಾಗದೆ ಉಳಿದಿದ್ದ 35 ಸಾವಿರ ಕೋಟಿ ಹಣ ಯಾವ ರೀತಿ ಬಳಕೆಯಾಗಿದೆ ಎಂಬುದಕ್ಕೆ ಲೆಕ್ಕ ಸಿಗುತ್ತಿಲ್ಲ. ಖರ್ಚಾಗಿರುವ ಹಣಕ್ಕೂ, ಲೆಕ್ಕಕ್ಕೂ ತಾಳೆಯಾಗದಿರುವುದರಿಂದ ಸಮಗ್ರ ತನಿಖೆ ನಡೆಸಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಲೋಕೋಪಯೋಗಿ, ವಿದ್ಯುತ್, ನಗರಾಭಿವೃದ್ದಿ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ಮತ್ತಿತರ ಇಲಾಖೆಗಳಲ್ಲಿ 35 ಸಾವಿರ ಕೋಟಿಗೂ ಹೆಚ್ಚು ಹಣದ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಇದರ ಬಗ್ಗೆ ಚರ್ಚೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ವರದಿಯಲ್ಲಿ ಉಲ್ಲೇಖವಾಗಿದೆ.

ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಣೆ ಮಾಡುವ ಯೋಜನೆಯಲ್ಲಿ ಹಾಲಿ ಇರುವ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಮವಸ್ತ್ರ ಖರೀದಿ ಮಾಡಲಾಗಿದೆ.45 ಲಕ್ಷ ವಿದ್ಯಾರ್ಥಿಗಳಿದ್ದರೆ 50 ಲಕ್ಷಕ್ಕೂ ಅಧಿಕ ಸಮವಸ್ತ್ರಗಳನ್ನು ಖರೀದಿಸಲಾಗಿದೆ.

ಹೆಚ್ಚುವರಿಯಾಗಿ ಯಾವ ಕಾರಣಕ್ಕಾಗಿ ಖರೀದಿ ಮಾಡಲಾಯಿತು. ಖರೀದಿಸಿದ ಸಮವಸ್ತ್ರ ಎಲ್ಲಿ ಹೋಯಿತು?ಇದರ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಶುದ್ಧ ಘಟಕಗಳನ್ನು ಕಡಿಮೆ ಸಂಖ್ಯೆಯಲ್ಲಿ ಅಳವಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ.

ಕೆಲವು ಕಡೆ ಕಳಪೆ ದರ್ಜೆಯ ಘಟಕಗಳನ್ನು ಅಳವಡಿಸಿರುವುದರಿಂದ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇನ್ನು ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವುದರಲ್ಲೂ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ.ಹೀಗೆ ಹಲವು ಇಲಾಖೆಗಳಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ನಡೆದಿರುವುದರಿಂದ ತನಿಖೆ ನಡೆಸಲು ಸಿಎಜಿ ಶಿಫಾರಸು ಮಾಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ