ಬೆಂಗಳೂರು,ಡಿ.20- ಎಲ್ಲಾ ಬಿಟ್ಟು ಭಂಗಿ ನೆಟ್ಟ … ಅನ್ನೋ ಹಾಗಾಗಿದೆ ಬಿಬಿಎಂಪಿ ಕಥೆ.
ನಗರದ ರಸ್ತೆಗಳೆಲ್ಲ ಹಾಳು ಬಿದ್ದು, ಹಡಾಲೆದ್ದು ಹೋಗಿದೆ.ರಸ್ತೆಗಳ ತುಂಬೆಲ್ಲಾ ಗುಂಡಿಗಳೇ ಎದ್ದು ಕಾಣುತ್ತಿವೆ. ಗುಂಡಿ ಮುಚ್ಚುವ ಸಂಬಂಧ ಬಿಬಿಎಂಪಿ ಹೈಕೋರ್ಟ್ನಿಂದ ಛೀಮಾರಿಗೆ ಒಳಗಾಗಿದ್ದರೂ ಕ್ಯಾರೆ ಎನ್ನದೇ ಮತ್ತದೇ ಹಳೇ ಚಾಳಿಯನ್ನೇ ಮುಂದುವರೆಸಿದೆ.
ಈಚೆಗೆ ಟೆಂಡರ್ ಶ್ಯೂರ್ ರಸ್ತೆಯ ನೆಪದಲ್ಲಿ ಭರ್ಜರಿ ಮೇಯ್ದಾಟಕ್ಕೆ ಅಣಿಯಾಗಿರುವ ಬೆನ್ನಲ್ಲೇ ಇದೀಗ ಸೈಕಲ್ ಪಾತ್ ಜಪ ಮಾಡುತ್ತಿದೆ!
ಹೌದು, ಮೆಟ್ರೋ ಮಾರ್ಗಗಳಲ್ಲಿ ಸೈಕಲ್ ಫೀಡರ್ ಸೇವೆ ನಿಡಲು ಬಿಬಿಎಂಪಿ ಚಿಂತಿಸಿದೆ. ಈ ಮೂಲಕ ಮೆಟ್ರೋ ಸ್ಟೇಷನ್ಗಳ ಜಾಗದಲ್ಲಿ ಚೆನ್ನಾಗಿರೋ ಫುಟ್ಪಾತ್ಗಳನ್ನು ಮತ್ತೆ ಅಭಿವೃದ್ಧಿ ಪಡಿಸೋದು, ಜೊತೆಗೆ ಈಗಾಗಲೇ ಸಂಚಾರಿ ಕಿರಿಕಿರಿ ಎದುರಿಸುತ್ತಿರುವ ಕಿರಿದಾದ ರಸ್ತೆಗಳಲ್ಲಿ 3 ಅಡಿಯ ಸೈಕಲ್ ಟ್ರ್ಯಾಕ್ ಮಾಡಲು ಮುಂದಾಗಿದೆ.
ಮಾಡುವ ಕೆಲಸ ಬಿಟ್ಟು ಇಲ್ಲಸಲ್ಲದ ಯೋಜನೆಗಳಿಗೆ ಕೈ ಹಾಕುವ ಮೂಲಕ ಬಿಬಿಎಂಪಿ ದುಂದು ವೆಚ್ಚಕ್ಕೆ ಕೈ ಹಚ್ಚಿದೆ.
ಮೊದಲ ಹಂತದಲ್ಲಿ ಬಿಬಿಎಂಪಿ ರೋಡ್ ಇನ್ಫ್ರಾ ವತಿಯಿಂದ 55 ಕೋಟಿ ರೂ.ಟೆಂಡರ್ ಕರೆಯಲಾಗಿದೆ. ಈ ಪ್ರಕಾರ ಎಂ.ಜಿ.ರಸ್ತೆ, ಇಂದಿರಾ ನಗರ, ಬೈಯಪ್ಪನ ಹಳ್ಳಿ, ಔಟರ್ ರಿಂಗ್ ರೋಡ್ ಮತ್ತು ಐಟಿ ಹಬ್ಗಳಲ್ಲಿ ಈ ಸೈಕಲ್ ಟ್ರ್ಯಾಕ್ ಬರಲಿದೆ.
ಇದಕ್ಕಾಗಿ ಬಿಬಿಎಂಪಿ ಈಗಾಗಲೇ ಚೆನ್ನಾಗಿರುವ ಫುಟ್ಪಾತ್ಗಳನ್ನು ಮತ್ತೆ ಅಭಿವೃದ್ಧಿ ಪಡಿಸಿ, ಕಾಂಕ್ರಿಟ್ ರೂಪದಲ್ಲಿ ಸೈಕಲ್ ಟ್ರ್ಯಾಕ್ ಸಿದ್ದಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಎರಡನೇ ಹಂತದಲ್ಲಿ 45 ಕೋಟಿ ರೂ.ವೆಚ್ಚದಲ್ಲಿ ಸೈಕಲ್ ಯೋಜನೆ ಟೆಂಡರ್ ಆಗಲಿದೆ.ಪಾಲಿಕೆ ಈ ಯೋಜನೆಗೆ ಜನರ ಬೇಡಿಕೆ ಇದೆ ಎಂಬ ಕಾರಣ ನಿಡಿದೆ.ಸೈಕಲ್ ಪರಿಸರ ಸ್ನೇಹಿ ಎಂಬುದೇನೋ ನಿಜ ಆದರೆ ಈಗಾಗಲೇ ಜಯನಗರದಲ್ಲಿ ಕಿಲೋ ಮೀಟರ್ಗಟ್ಟಲೇ ಸೈಕಲ್ ಟ್ರ್ಯಾಕ್ ಮಾಡಿ ಯಾವುದಕ್ಕೂ ಪ್ರಯೋಜನವಿಲ್ಲದಂತಾಗಿರುವುದು ಕಣ್ಣ ಮುಂದೆಯೇ ಇದೆ.
ಮೆಟ್ರೋ ಮೂಲ ಒಪ್ಪಂದದ ಪ್ರಕಾರ ಮೆಟ್ರೋ ಕಾಮಗಾರಿ ಹಾಗೂ ಉಪಯೋಗದಿಂದ ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ಮೆಟ್ರೋವೇ ಮತ್ತೆ ಸರಿಪಡಿಸಬೇಕು.ಹೀಗಿರುವಾಗ ಮೆಟ್ರೋ ಸಮೀಪದ ಫುಟ್ಪಾತ್ ಕೆಲಸವನ್ನು ಬಿಬಿಎಂಪಿ ತಲೆ ಮೇಲೆ ಹಾಕಿಕೊಳ್ಳಲು ಹೊರಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ನಗರದಲ್ಲಿ ಮಾಡಬೇಕಾದ ಕಾರ್ಯಗಳೇ ಸಾಕಷ್ಟಿವೆ. ಅದು ಬಿಟ್ಟು ಇನ್ನಿಲ್ಲದ ಹೊಸ ಹೊಸ ಕಸರತ್ತುಗಳಿಗೆ ಬಿಬಿಎಂಪಿ ಮುಂದಾಗುತ್ತಿರುವುದರ ಹಿಂದಿನ ಕರಾಮತ್ತೇನು ಎಂಬುದೇ ಸಾರ್ವಜನಿಕರ ಪ್ರಶ್ನೆಯಾಗಿದೆ.
ಹೀಗೆ ಅನಗತ್ಯ ಕಾರ್ಯಗಳಿಗೆ ಕೋಟಿ ಕೋಟಿ ವ್ಯಯಿಸುವುದು ಬಿಟ್ಟು ಮೊದಲು ನಗರದ ರಸ್ತೆಗಳನ್ನು ಸರಿಪಡಿಸಲಿ.ಸುಖಾಸುಮ್ಮನೆ ದುಂದುವೆಚ್ಚಕ್ಕೆ ಕಡಿವಾಣ ಹಾಕಲಿ.
ಡಾಂಬರು ರಸ್ತೆನೇ ನೆಟ್ಟಗಿಲ್ಲ; ಇನ್ನು ಸೈಕಲ್ಗೆ ಕಾಂಕ್ರಿಟ್ ರಸ್ತೆ ಹಾಕಲು ಬಿಬಿಎಂಪಿ ಮುಂದಾಗಿರುವುದು ವ್ಯಂಗ್ಯವೇ ಸರಿ.