ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಈ ವರ್ಷದ 17ನೇ ಹಾಗೂ ಕೊನೆಯ ರಾಕೆಟ್ ಉಡ್ಡಯನ ಇಂದು ಸಂಜೆ 4.10ಕ್ಕೆ ನಡೆಯಲಿದೆ. ಈ ಮೂಲಕ ಸಂವಹನ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಬಲ ತುಂಬಲಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ನಭಕ್ಕೆ ಜಿಗಿಯಲಿರುವ ಜಿಸ್ಯಾಟ್-7ಎ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಲಿದೆ.
ಇಂದು ಉಡಾವಣೆಯಾಗಲಿರುವ ಜಿಸ್ಯಾಟ್-7ಎ ವಿವಿಧ ರಡಾರ್ ಸ್ಟೇಷನ್ಗಳು, ಏರ್ಬೇಸ್ಗಳಿಗೆ ಸಂಪರ್ಕ ಕಲ್ಪಿಸಲಿದೆ. ಇದರೊಂದಿಗೆ ವಾಯುಸೇನೆಯ ನೆಟ್ವರ್ಕ್ ಕೇಂದ್ರಿತ ಯುದ್ಧ ಸಾಮರ್ಥ್ಯ ಹಾಗೂ ಜಾಗತಿಕ ಕಾರ್ಯಾಚರಣೆಗಳಿಗೆ ಉತ್ತೇಜನ ನೀಡಲಿದೆ.
ಇಷ್ಟು ಮಾತ್ರವಲ್ಲದೆ ಡ್ರೋಣ್ ಬಳಸಿ ನಡೆಸುವ ಕಾರ್ಯಾಚರಣೆಗಳಿಗೆ ಇಂದು ನಭಕ್ಕೆ ಜಿಗಿಯಲಿರುವ ಜಿಸ್ಯಾಟ್-7ಎ ಸಾಕಷ್ಟು ಸಹಕಾರ ನೀಡಲಿದೆ. ಗರಿಷ್ಠ ದೂರದಿಂದ ಶತ್ರು ರಾಷ್ಟ್ರದ ಮೇಲೆ ದಾಳಿ ನಡೆಸುವ ಭಾರತದ ಕನಸನ್ನು ಜಿಸ್ಯಾಟ್-7ಎ ಪೂರೈಸಲಿದೆ.
ಜಿಸ್ಯಾಟ್-7ಎ ವಿಶೇಷತೆಗಳು:
ಇಂದಿನ ಈ ಉಡ್ಡಯನಕ್ಕೆ ಸುಮಾರು 500ರಿಂದ 800 ಕೋಟಿ ಖರ್ಚು ಮಾಡಲಾಗಿದೆ. ಈ ಸ್ಯಾಟಲೈಟ್ನಲ್ಲಿ ಮೂರು ಸೋಲಾರ್ ಪ್ಯಾನೆಲ್ ಇದ್ದು 3.3 ಕಿ.ವ್ಯಾ. ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಭಾರತದ ಮಿಲಿಟರಿಯಲ್ಲಿ ಉಪಗ್ರಹದ ಕೊಡುಗೆ:
ಸದ್ಯ ಭಾರತದ ಸೇನೆಗೆ 13 ಉಪಗ್ರಹಗಳು ಸೇವೆ ಸಲ್ಲಿಸುತ್ತಿದ್ದು, ಇದರಲ್ಲಿ ಹಲವು ದೂರ ಸಂವೇದಿ ಉಪಗ್ರಹಗಳಾಗಿವೆ. ಇವುಗಳು ಭೂಮಿಯ ಅನತಿ ದೂರದಲ್ಲಿವೆ. ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗೆ ಈ ದೂರ ಸಂವೇದಿ ಉಪಗ್ರಹಗಳು ಸಹಾಯ ಮಾಡಿದ್ದವು.
ವಿಶ್ವದಾದ್ಯಂತ 320 ಉಪಗ್ರಹಗಳು ರಕ್ಷಣಾ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದೆ. ಇದರಲ್ಲಿ ಸುಮಾರು ಅರ್ಧದಷ್ಟನ್ನು ಅಮೆರಿಕ ಹೊಂದಿದ್ದರೆ ನಂತರದಲ್ಲಿ ರಷ್ಯಾ ಹಾಗೂ ಚೀನಾ ಸ್ಥಾನ ಪಡೆದಿವೆ.