ಬೆಳಗಾವಿ(ಸುವರ್ಣಸೌಧ), ಡಿ.19-ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಕೇವಲ ನಿಗಮ ಮಂಡಳಿಗಳ ನೇಮಕವೋ ಎಲ್ಲಾ ಗೊಂದಲಗಳ ನಡುವೆಯೂ ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ.
ಡಿ.22ರಂದು ಸಚಿವ ಸಂಪುಟ ವಿಸ್ತರಣೆ, ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡುವುದಾಗಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, ಕಾಂಗ್ರೆಸ್ ಯಾವಾಗ ಹೇಳುತ್ತದೆ, ಆಗ ಸಂಪುಟ ವಿಸ್ತರಣೆ ಮಾಡಲು ನಾನು ಸಿದ್ಧ ಎಂದು ಖಚಿತಪಡಿಸಿದ್ದಾರೆ.
ಹೀಗಾಗಿ ಸಂಪುಟ ವಿಸ್ತರಣೆಯಾಗುವುದು ಖಚಿತ ಎಂದು ಹಲವು ಶಾಸಕರು ತಮ್ಮ ಲಾಬಿಯನ್ನು ತೀವ್ರಗೊಳಿಸಿ ದೆಹಲಿಯ ಕದ ತಟ್ಟಿದ್ದಾರೆ.ಪ್ರಭಾವಿಗಳು ಹೈಕಮಾಂಡ್ ನಾಯಕರ ಬಳಿ ಲಾಬಿ ನಡೆಸುತ್ತಿದ್ದಾರೆ.ಡಿ.22 ರಂದು ಸಂಜೆ 5 ಗಂಟೆಗೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರಾಜ್ಯಪಾಲರ ಅನುಮತಿಗೆ ಪತ್ರವೂ ಕೂಡ ಹೋಗಿದೆ ಎಂಬ ಮಾಹಿತಿ ಕೇಳಿ ಬಂದಿದೆ.
ಸಚಿವಾಕಾಂಕ್ಷಿಗಳು ಒಂದೆಡೆ ಲಾಬಿ ತೀವ್ರಗೊಳಿಸಿದರೆ, ಮತ್ತೊಂದೆಡೆ ಸಚಿವ ಸಂಪುಟ ವಿಸ್ತರಣೆಯಾಗುವುದು ಅನುಮಾನ. ಇನ್ನು ರಾಜ್ಯ ನಾಯಕರು ದೆಹಲಿಗೆ ತೆರಳಿಲ್ಲ. ಅವರು ತೆರಳಿ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಿ ಅವರು ಅನುಮತಿ ನೀಡಿದ ನಂತರ ಸಚಿವ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಆಗಲಿದೆ.ಇವೆಲ್ಲ ಒಂದು ದಿನದಲ್ಲಿ ನಡೆಯುವ ಕೆಲಸವಲ್ಲ. ಈ ಪ್ರಕ್ರಿಯೆ ಸಾಕಷ್ಟು ವಿಳಂಬವಾಗುತ್ತದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಶೂನ್ಯಮಾಸದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆಯೇ ಎಂಬುದು ಹಲವರ ವಾದವಾಗಿದೆ.ಈ ಎಲ್ಲಾ ವಾದ-ವಿವಾದಗಳ ನಡುವೆಯೇ 20 ರಂದು ರಾಜ್ಯ ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.ರಾಹುಲ್ಗಾಂಧಿಯವರು ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ, ಸಂಸದೀಯ ಕಾರ್ಯದರ್ಶಿಗಳ ನೇಮಕಕ್ಕೆ ಅನುಮತಿ ನೀಡಿದರೆ ಅಂದುಕೊಂಡಂತೆ ಆಗುತ್ತದೆ. ಹೈಕಮಾಂಡ್ ನಾಯಕರೇನಾದರೂ ಮೀನಾಮೇಷ ಎಣಿಸಿದರೆ ಈ ಪ್ರಕ್ರಿಯೆ ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡುವ ಅನುಮಾನ ಕಾಡತೊಡಗಿದೆ.
ಸಂಪುಟ ಸೇರ್ಪಡೆಗೆ ಈಗಾಗಲೇ ಸಂಭವನೀಯರ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ. ಲಿಂಗಾಯತ ಖೋಟಾದಿಂದ ಬಿ.ಕೆ.ಸಂಗಮೇಶ್, ಎಸ್.ಆರ್.ಪಾಟೀಲ್, ಬಿ.ಸಿ.ಪಾಟೀಲ್, ಕುರುಬ ಖೋಟಾದಿಂದ ಎಂ.ಟಿ.ಬಿ.ನಾಗರಾಜ್, ಸಿ.ಎಸ್.ಶಿವಳ್ಳಿ, ಎಚ್.ಎಂ.ರೇವಣ್ಣ, ಎಸ್ಟಿ ಖೋಟಾದಿಂದ ಇ. ತುಕಾರಾಮ್, ಸತೀಶ್ ಜಾರಕಿ ಹೊಳಿ, ನಾಗೇಂದ್ರ, ಎಸ್ಸಿ ಖೋಟಾದಿಂದ ರೂಪಾ ಶಶಿಧರ್, ಆರ್.ಬಿ.ತಿಮ್ಮಾಪುರ್, ಧರ್ಮಸೇನ, ಅಲ್ಪಸಂಖ್ಯಾತರ ಖೋಟಾದಿಂದ ರಹೀಮ್ಖಾನ್, ತನ್ವೀರ್ಸೇಠ್, ರೆಡ್ಡಿ ಮತ್ತು ಸಾಮಾನ್ಯವರ್ಗದಿಂದ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಎಂ.ಕೃಷ್ಣಪ್ಪ ಇವರುಗಳಲ್ಲಿ ಆರು ಜನರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ನಿಗದಿಯಂತೆ ಸಂಪುಟ ವಿಸ್ತರಣೆಯಾದರೆ ಆರು ಜನರು ಹೊಸದಾಗಿ ಸಂಪುಟ ಸೇರ್ಪಡೆಯಾಗಲಿದ್ದಾರೆ. ಹತ್ತು ಜನ ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಲು ನಿರ್ಧರಿಸಿದ್ದು, ಕಾಂಗ್ರೆಸ್ ಪಾಲಿನ 6ಜನರಿಗೆ ಅವಕಾಶ ದೊರೆಯಲಿದೆ. 30 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಲು ನಿರ್ಧರಿಸಿದ್ದು, ಕಾಂಗ್ರೆಸ್ ಪಾಲಿನ 20 ಜನ ಶಾಸಕರಿಗೆ ಅವಕಾಶ ದೊರೆಯಲಿದೆ.ಡಿ.22 ರಂದು ಸಂಪುಟ ವಿಸ್ತರಣೆಯಾಗಲಿದೆಯೋ, ಇಲ್ಲವೋ ಕಾದು ನೋಡಬೇಕು.