ಮಾನವ ಮತ್ತು ಆನೆ ಸಂಘರ್ಷವನ್ನು ತಡೆಗಟ್ಟಲು ರಾಜ್ಯ ಸರ್ಕಾರದಿಂದ ಕ್ರಮ, ಸಚಿವ ಆರ್.ಶಂಕರ್

ಬೆಳಗಾವಿ(ಸುವರ್ಣಸೌಧ), ಡಿ.19-ಆನೆ ಮತ್ತು ಮಾನವ ಸಂಘರ್ಷವನ್ನು ಶಾಶ್ವತವಾಗಿ ತಡೆಗಟ್ಟಲು ರಾಜ್ಯ ಸರ್ಕಾರ ಶೀಘ್ರದಲ್ಲೇ ತುರ್ತು ಕ್ರಮಕೈಗೊಳ್ಳಲಿದೆ ಎಂದು ಅರಣ್ಯ ಸಚಿವ ಆರ್.ಶಂಕರ್ ವಿಧಾನಪರಿಷತ್‍ನಲ್ಲಿಂದು ತಿಳಿಸಿದರು.

ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆನೆಗಳ ಸಂಘರ್ಷವನ್ನು ತಡೆಗಟ್ಟಲು ಕ್ರಮಕೈಗೊಳ್ಳಲು ಅನುದಾನವನ್ನು ನೀಡಿದ್ದಾರೆ.ಶೀಘ್ರದಲ್ಲೇ ಅಧಿಕಾರಿಗಳ ಜೊತೆ ಚರ್ಚಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದ್ದೇವೆ ಎಂದು ತಿಳಿಸಿದರು.

ಸದಸ್ಯ ಎಂ.ಕೆ.ಪ್ರಾಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲೆಲ್ಲಿ ಆನೆ ಹಾವಳಿ ಇದೆಯೋ ಅಂತಹ ಕಡೆ ರೈಲ್ವೆ ಕಂಬಿ ಅಳವಡಿಸಿ, ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವುದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರ, ಆನೆ ನಿರೋಧಕ ಕಂದಕ, ಸೋಲಾರ್ ಫೆನ್ಸಿಂಗ್‍ಗಳ ನಿರ್ಮಾಣ, ಆನೆ ಕ್ಯಾಂಪ್‍ಗಳ ನಿರ್ಮಾಣ ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಆದರೆ ಸಚಿವರ ಉತ್ತರಕ್ಕೆ ತೃಪ್ತರಾಗದ ಸದಸ್ಯ ಎಂ.ಕೆ.ಪ್ರಾಣೇಶ್ ಮತ್ತು ಸುನೀಲ್‍ಸುಬ್ರಹ್ಮಣ್ಯ ಅವರು, ಸಚಿವರು ಸದನಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಮೂಡಿಗೆರೆ ಮತ್ತು ಕೊಡಗಿನಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಶಾಶ್ವತ ಊನಕ್ಕೆ ಒಳಗಾಗಿದ್ದಾರೆ.ಅಡಿಕೆ, ಕಾಫಿ ತೋಟ ಸೇರಿದಂತೆ ಫಸಲಿಗೆ ಬಂದ ಬೆಳೆಗಳನ್ನು ಆನೆಗಳು ಸಂಪೂರ್ಣವಾಗಿ ಹಾಳು ಮಾಡಿವೆ. ಇನ್ನೂ ಕೆಲವು ಕಡೆ ನಗರ ಪ್ರದೇಶಗಳಿಗೆ ನುಗ್ಗಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿವೆ. ಸಚಿವರು ಮಾತ್ರ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಸದಸ್ಯರ ಧರಣಿಗೆ ದನಿಗೂಡಿಸಿದ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸಪೂಜಾರಿ, ಆನೆ ಹಾವಳಿ ತಡೆಗಟ್ಟಲು ಸರ್ಕಾರ ವಿಫಲವಾಗಿದೆ.ಇದಕ್ಕೆ ಶಾಶ್ವತ ಪರಿಹಾರ ನೀಡುವುದೊಂದೇ ಸರಿಯಾದ ಮಾರ್ಗ.ನಿಮ್ಮ ಅಧಿಕಾರಿಗಳು, ಎನ್‍ಜಿಒ ಇಲ್ಲವೇ ವನ್ಯಜೀವಿ ಸಂರಕ್ಷಕರ ಜೊತೆ ಸೇರಿಕೊಂಡು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಆನೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯಿಂದ ಜನರ ಜೀವನ ಮೂರಾಬಟ್ಟೆಯಾಗಿದೆ. ಇದಕ್ಕೆ ಯಾರು ಹೊಣೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಚಿವರು ಅಧಿಕಾರಿಗಳು ಕೊಟ್ಟ ಉತ್ತರವನ್ನು ನೀಡದೆ ಏನು ನಡೆಯುತ್ತಿದೆ ಎಂಬುದನ್ನು ಮೊದಲು ತಿಳಿಯಬೇಕು. ಒಂದು ಆನೆ ಹಿಡಿಯಲು ಒಂದು ಕೋಟಿ ಖರ್ಚು ಮಾಡಿರುವುದು ಮಾಹಿತಿ ಹಕ್ಕು ಆಯೋಗದಿಂದ ಬಹಿರಂಗವಾಗಿದೆ.ಪುಂಡಾನೆಗಳನ್ನು ಸೆರೆಹಿಡಿದು ಶಾಶ್ವತವಾಗಿ ಸ್ಥಳಾಂತರ ಮಾಡಬೇಕು. ಇಲ್ಲವಾದರೆ ಇನ್ನೆಷ್ಟು ಜನ ಪ್ರಾಣ ಕಳೆದುಕೊಂಡಾರೋ ಎಂದು ಆತಂಕ ವ್ಯಕ್ತಪಡಿಸಿದರು.

ಅರಣ್ಯ ಸಚಿವ ಆರ್.ಶಂಕರ್ ಮಾತನಾಡಿ, ಈಗಾಗಲೇ 22 ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗಿದೆ.ಮುಖ್ಯಮಂತ್ರಿಗಳು ಇದಕ್ಕೆ ಹಣವನ್ನೂ ಸಹ ನೀಡಿದ್ದಾರೆ.ಸಮಸ್ಯೆ ಪರಿಹರಿಸಲು ನಾನು ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.

ಈ ವೇಳೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಪುಂಡಾನೆಗಳನ್ನು ಹಿಡಿದು ತಕ್ಷಣವೇ ಸ್ಥಳಾಂತರ ಮಾಡಿ ಜನರಿಗೆ ರಕ್ಷಣೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ