ಬೆಳಗಾವಿ(ಸುವರ್ಣಸೌಧ), ಡಿ.19-ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಲಕ್ಷ್ಯ ಮಾಡುವ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಬರಪರಿಸ್ಥಿತಿ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾಪಂಚಾಯತ್ ಮುಖ್ಯಾಧಿಕಾರಿಗಳ ಸಭೆ ಕರೆದು ಸ್ಪಷ್ಟ ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಕ್ರಮಕೈಗೊಳ್ಳಲು 50 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ.
ಮುಂದಿನ ಜನವರಿ ಯಿಂದ ಏಪ್ರಿಲ್‍ವರೆಗೂ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ತಾಕೀತು ಮಾಡಲಾಗಿದೆ.ಆರಂಭಿಕ ಹಂತದಲ್ಲಿ 50 ಲಕ್ಷ ರೂ.ಗಳವರೆಗೂ ಕುಡಿಯುವ ನೀರಿನ ಕಾಮಗಾರಿ ಕೈಗೆತ್ತಿಕೊಳ್ಳಲು ಸ್ಪಷ್ಟ ಸೂಚನೆ ನೀಡಲಾಗಿದೆ. ಯಾವುದೇ ಜಿಲ್ಲಾಧಿಕಾರಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.
ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಈಗಾಗಲೇ ಸರ್ಕಾರ ಕ್ರಮಕೈಗೊಂಡಿದೆ.ಅದನ್ನು ಮೀರಿ ಕೊರತೆ ಇರುವುದು ವಿರೋಧ ಪಕ್ಷಗಳ ಶಾಸಕರ ಗಮನಕ್ಕೆ ಬಂದಿದ್ದರೆ ನಮಗೆ ಮಾಹಿತಿ ನೀಡಿ, ಬಿಜೆಪಿ ಶಾಸಕರು, ಮುಖಂಡರು 5ತಂಡಗಳನ್ನು ರಚಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿರುವುದಾಗಿ ಹೇಳುತ್ತಿದ್ದಾರೆ.ಪ್ರವಾಸದ ವೇಳೆ ಸಿಕ್ಕಿರುವ ಮಾಹಿತಿಗಳನ್ನು ಸರ್ಕಾರದ ಗಮನಕ್ಕೆ ತಂದರೆ ನಾವು ತಕ್ಷಣ ಕ್ರಮ ಜರುಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಅವರು, ನಾವು ಮಾಹಿತಿ ಕೊಡುವುದಾದರೆ ಸರ್ಕಾರದ ಆಡಳಿತ ಯಂತ್ರ ಏನು ಮಾಡುತ್ತಿದೆ? ಸರಿಯಾದ ಮಾಹಿತಿ ಇಲ್ಲದೆ ನೀವು ಬರ ಘೋಷಣೆ ಮಾಡಿದೀರಾ ಎಂದು ಖಾರವಾಗಿ ಉತ್ತರಿಸಿದಲ್ಲದೆ, ಬರಪೀಡಿತ ತಾಲೂಕುಗಳ ಬಗ್ಗೆ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದ್ದೇವೆ. ಆದರೂ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಹಿರಿಯ ಶಾಸಕ ಸಿ.ಎಂ.ಉದಾಸಿ ಅವರು, ಶಾಸಕರ ನೇತೃತ್ವದ ಟಾಸ್ಕ್ ಫೋರ್ಸ್ ನಿಂದ ಕುಡಿಯುವ ನೀರಿನ ಯೋಜನೆಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿಗಳು ಮಂಜೂರು ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದರೆ ಮಾತ್ರ ಮಂಜೂರಾಗುತ್ತದೆ ಎಂದರೆ ಎಷ್ಟು ಬಾರಿ ಭೇಟಿಯಾಗಬೇಕು ಎಂದು ಪ್ರಶ್ನಿಸಿದರು.
ಕೆ.ಎಸ್.ಈಶ್ವರಪ್ಪ ಮಾತನಾಡಿ, ಸರ್ಕಾರ ಬಿಡುಗಡೆ ಮಾಡಿರುವ 50 ಲಕ್ಷ ರೂ.ಸಾಲುವುದಿಲ್ಲ. ಕೂಡಲೇ ಒಂದೇ ಕಂತಿನಲ್ಲಿ ಒಂದು ಕೋಟಿ ರೂ.ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.
ಕುಮಾರಬಂಗಾರಪ್ಪ ಮಾತನಾಡಿ, ನದಿ ಜೋಡಣೆ ಮೂಲಕ ಬರಪರಿಸ್ಥಿತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೆ.ಜಿ.ಬೋಪಯ್ಯ ಮಾತನಾಡಿ, ಅತಿವೃಷ್ಟಿಯಿಂದ ಕಾಫಿ ತೋಟ ಕಳೆದುಕೊಂಡಿರುವವರಿಗೆ 10 ಎಕರೆ ಭೂಮಿ ನೀಡಿ ಎಂದು ಮನವಿ ಮಾಡಿದರು.
ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಮಾತನಾಡಿ, ಮೇವಿನ ಕೊರತೆ ಇದೆ.ಕುಡಿಯುವ ನೀರಿನ ಕೊರತೆ ಇದೆ.ಕಳೆದ ವರ್ಷ ಟ್ಯಾಂಕರ್ ಮೂಲಕ ನೀರು ಪೂರೈಸಿದವರಿಗೆ ಹಣ ಕೊಟ್ಟಿಲ್ಲ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಗೋಶಾಲೆ ತೆರೆದಿಲ್ಲ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ದೇಶಾದ್ಯಂತ 24 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿದೆ.ಅದರಲ್ಲಿ 16 ಜಿಲ್ಲೆಗಳು ಕರ್ನಾಟಕದಲ್ಲಿವೆ ಎಂಬುದು ದುರಂತ.ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಬರ ಪರಿಹಾರ ಕೈಗೊಳ್ಳಬೇಕು ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಬರಪರಿಸ್ಥಿತಿ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಎಲ್ಲಾ ಅಧಿಕಾರಿಗಳಿಂದಲೂ ಮಾಹಿತಿ ಪಡೆಯುತ್ತಿದ್ದೇನೆ. ಯಾರಾದರೂ ಸುಳ್ಳು ಮಾಹಿತಿ ಕೊಟ್ಟಿದ್ದರೆ ಅದು ಸ್ಥಳ ಪರಿಶೀಲನೆ ಮಾಡುವಾಗ ಪತ್ತೆಯಾದರೆ ಮುಲಾಜಿಲ್ಲದೆ ತಕ್ಷಣ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.