ಬೆಳಗಾವಿ(ಸುವರ್ಣಸೌಧ), ಡಿ.19-ಇಲ್ಲಿನ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ವಿಧಾನಸಭೆ ಅಧಿವೇಶನಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಇದ್ದು, ಶಾಸಕರ ನಿರಾಸಕ್ತಿ ಎದ್ದು ಕಾಣುತ್ತಿತ್ತು.
ಬರಪೀಡಿತ ತಾಲೂಕುಗಳ ಬಗ್ಗೆ ಕಳೆದ ವಾರದಿಂದಲೂ ನಿರಂತರವಾಗಿ ಚರ್ಚೆ ನಡೆದಿತ್ತು. ಇಂದು ಅದಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ ವಿರೋಧ ಪಕ್ಷದ ಶಾಸಕರ ಹಾಜರಾತಿ ಉತ್ತಮವಾಗಿದ್ದರೆ, ಆಡಳಿತ ಪಕ್ಷದ ಕಾಂಗ್ರೆಸ್-ಜೆಡಿಎಸ್ ಶಾಸಕರ ಸಂಖ್ಯೆ ಕಡಿಮೆ ಇತ್ತು. ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿ ಸಂಪುಟ ವಿಸ್ತರಣೆ ದಿನಾಂಕವನ್ನು ಖಚಿತ ಪಡಿಸಿದ ನಂತರವೂ ಬಹಳಷ್ಟು ಮಂದಿ ಸದನದಿಂದ ಹೊರ ಉಳಿದ್ದಾರೆ.ಇನ್ನೂ ಕೆಲವರಿಗೆ ಅಧಿವೇಶನ ನೆಪಮಾತ್ರಕ್ಕಷ್ಟೇ ಎಂಬಂತಾಗಿದೆ.
ವಿಧಾನಸಭೆಯ ಅಧಿವೇಶನದಲ್ಲಿಂದು ಪ್ರತಿಪಕ್ಷದ ಶಾಸಕರಾದ ಕೆ.ಎಸ್.ಈಶ್ವರಪ್ಪ ಈ ವಿಷಯವನ್ನು ನೇರವಾಗಿ ಹೇಳುವ ಮೂಲಕ ರಾಜ್ಯ ಸರ್ಕಾರ ಅಧಿವೇಶನದಲ್ಲಿ ಸಂಖ್ಯಾಬಲದ ಕೊರತೆಯಿಂದ ಬಳಲುತ್ತಿರುವ ಬಗ್ಗೆ ಪರೋಕ್ಷ ಎಚ್ಚರಿಕೆ ನೀಡಿದರು.
ನಿನ್ನೆ ಪೂರಕ ಅಂದಾಜು ಅಂಗೀಕಾರದ ವೇಳೆ ಆಡಳಿತ ಪಕ್ಷದ ಕಾಂಗ್ರೆಸ್-ಜೆಡಿಎಸ್ ಶಾಸಕರ ಸಂಖ್ಯೆ ಕಡಿಮೆಯಿತ್ತು. ಆಡಳಿತ ಪಕ್ಷಕ್ಕಿಂತಲೂ ವಿರೋಧ ಪಕ್ಷದ ಶಾಸಕರ ಸಂಖ್ಯೆಯ ಹೆಚ್ಚಿತ್ತು.ನಾವು ಹಠ ಮಾಡಿ ಮತಕ್ಕೆ ಹಾಕಿದರೆ ಹಣಕಾಸಿಗೆ ಸಂಬಂಧಿಸಿದ ಕಾಯ್ದೆ ಅಂಗೀಕಾರಗೊಳ್ಳದೆ ಸೋಲುಂಟಾಗುತ್ತಿತ್ತು.ಆದರೆ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂಬ ಕಾರಣಕ್ಕಾಗಿ ನಾವು ಅಂಗೀಕಾರಕ್ಕೆ ಸಹಕಾರ ನೀಡಿದ್ದೇವೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣಭೆರೇಗೌಡ ಅವರು, ವಿರೋಧ ಪಕ್ಷಗಳಿಗೂ ಸರ್ಕಾರದಿಂದ ಸಹಕಾರ ಸಿಗುತ್ತಿದೆ ಎಂದು ಹೇಳಿದರು.
ಆಡಳಿತ ಪಕ್ಷದ ಬಹುತೇಕ ಶಾಸಕರು ಇಂದು ಸದನಕ್ಕೆ ಗೈರು ಹಾಜರಾಗಿದ್ದು, ಎದ್ದು ಕಾಣುತ್ತಿತ್ತು.