ಪೂರಕ ಅಂದಾಜು ಮೇಲಿನ ಚರ್ಚೆ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮುಕಿ

ಬೆಳಗಾವಿ, ಡಿ.18- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ 2018-19ನೇ ಸಾಲಿನ ಪೂರಕ ಅಂದಾಜುಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಪೂರಕ ಅಂದಾಜು ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಬಿಜೆಪಿ ಶಾಸಕ ಮಾಧುಸ್ವಾಮಿ ಮಾತನಾಡಿ, 7000 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಕೋರಲಾಗಿದ್ದು, ಇಲಾಖಾವಾರು ಪೂರ್ಣ ಮಾಹಿತಿ ಒದಗಿಸಿ ಎಂದು ಹೇಳಿದರು.

ಈ ಹಂತದಲ್ಲಿ ಜೆಡಿಎಸ್ ಶಿವಲಿಂಗೇಗೌಡ ಮಾತನಾಡಿ, ಇದುವರೆಗಿನ ಸರ್ಕಾರಗಳಲ್ಲಿ ಪೂರಕ ಅಂದಾಜುಗಳ ಬಗ್ಗೆ ಏನೇನು ಚರ್ಚೆ ನಡೆದಿದೆ ಎಂಬುದು ಗೊತ್ತಿದೆ. ಯಾವ ಪೂರಕ ಅಂದಾಜಿನಲ್ಲಿ ಪೂರ್ಣ ಮಾಹಿತಿ ನೀಡಲಾಗಿದೆ ಎಂಬುದನ್ನು ತೋರಿಸಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ವಿಚಾರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಮಾತಿನ ಚಕಮಕಿಗೆ ಕಾರಣವಾಗಿಯಿತು. ಸದನದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಒಂದು ಹಂತದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ವಿರೋಧ ಪಕ್ಷದವರು ಎತ್ತುವ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡುವುದಾಗಿ ಸ್ಪಷ್ಟಪಡಿಸಿದರು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು ಇಬ್ಬರು, ಮೂವರು ಸದಸ್ಯರು ಒಟ್ಟೊಟ್ಟಿಗೆ ಮಾತನಾಡುವುದರಿಂದ ದಾಖಲೆಗೆ ಹೋಗುವುದಿಲ್ಲ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ಮಂಡಿಸಿರುವ ಪೂರಕ ಅಂದಾಜು ಮೇಲಿನ ಚರ್ಚೆಗೆ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ತಾಳ್ಮೆಯಿಂದ ಪ್ರತಿಕ್ರಿಯಿಸಬೇಕೆಂದು ಸಲಹೆ ನೀಡಿದರು. ಅಲ್ಲಿಗೆ ಗೊಂದಲಕ್ಕೆ ತೆರೆ ಬಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ