ರೈತರ ಭತ್ತ ಖರೀದಿ ಕುರಿತು ಶಾಸಕ ಡಾ.ಯತೀಂದ್ರ ಮಾತನಾಡಿದ ಬಗ್ಗೆ ಸ್ಪೀಕರ್ ಮೆಚ್ಚುಗೆ

ಬೆಳಗಾವಿ(ಸುವರ್ಣಸೌಧ), ಡಿ.18-ರೈತರ ಭತ್ತ ಖರೀದಿ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರು ಅತ್ಯಂತ ತರ್ಕಬದ್ಧವಾಗಿ ಮಾತನಾಡಿ, ಸ್ಪೀಕರ್ ಅವರ ಮೆಚ್ಚುಗೆ ಗಳಿಸಿದ ಪ್ರಕರಣ ನಡೆಯಿತು.

ವಿಧಾನಸಭೆಯ ಶೂನ್ಯವೇಳೆಯಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ವರುಣಾ ಕ್ಷೇತ್ರದಲ್ಲಿ 18 ಸಾವಿರ ಎಕರೆಯಲ್ಲಿ ಭತ್ತ ಬೆಳೆಯಲಾಗಿದೆ. ಅದರಲ್ಲಿ ಸುಮಾರು 10 ಸಾವಿರ ಎಕರೆಯಲ್ಲಿ ಜ್ಯೋತಿ ತಳಿಯ ಭತ್ತದ ಬೆಳೆ ಇದೆ. ಈ ತಳಿಯ ಬಿತ್ತನೆ ಬೀಜ ಸರ್ಕಾರವೇ ವಿತರಣೆ ಮಾಡಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗಾಗಿ ಸರ್ಕಾರ ಬೆಂಬಲ ಬೆಲೆಯಡಿ ಭತ್ತ ಖರೀದಿ ಮಾಡುತ್ತಿದೆ. ಆದರೆ ಜ್ಯೋತಿ ಭತ್ತವನ್ನು ಖರೀದಿ ಮಾಡಲು ಸಚಿವ ಸಂಪುಟ ಉಪಸಮಿತಿ ಅನುಮತಿ ಬೇಕು ಎಂದು ಹೇಳಲಾಗುತ್ತಿದೆ.ಸರ್ಕಾರ ಪೂರೈಸಿದ ಬಿತ್ತನೆ ಬೀಜದ ತಳಿಯನ್ನು ಖರೀದಿ ಮಾಡಲು ವಿಳಂಬ ಮಾಡುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕೃಷಿ ಸಚಿವರ ಗಮನ ಸೆಳೆದರು.

ತಕ್ಷಣ ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು, ತುಂಬಾ ಚೆನ್ನಾಗಿ ಮಾತನಾಡುತ್ತಿದ್ದೀರ. ಇಷ್ಟು ದಿನ ಏಕೆ ಮಾತನಾಡಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧಿವೇಶನದಲ್ಲಿ ನಿರಂತರವಾಗಿ ಭಾಗವಹಿಸಿ ನಿಯಮಾವಳಿಗಳನ್ನು ಓದಿಕೊಂಡು ಬನ್ನಿ ಎಂದು ಸಲಹೆ ನೀಡಿದರು.

ಇಷ್ಟು ದಿನ ಮಾತನಾಡುವ ಅವಕಾಶ ಸಿಕ್ಕಿರಲಿಲ್ಲ. ಈಗ ಅವಕಾಶ ಸಿಕ್ಕಿದ್ದಕ್ಕೆ ಮಾತನಾಡುತ್ತಿರುವುದಾಗಿ ಹೇಳಿದರು.

ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಯತೀಂದ್ರ ಅವರು ಚೆನ್ನಾಗಿ ಮಾತನಾಡಿದ್ದಾರೆ. ಅವರ ಬೇಡಿಕೆಯನ್ನು ಪರಿಗಣಿಸಿ ಎಂದು ಶಿವಶಂಕರ್ ರೆಡ್ಡಿ ಅವರಿಗೆ ಸ್ಪೀಕರ್ ತಿಳಿಸಿದರು.

ಜೊತೆಗೆ ತಾಂತ್ರಿಕ ಸಮಸ್ಯೆಗಳಿಂದ ಖರೀದಿ ಕೇಂದ್ರದ ನೊಂದಣಿಗೆ ಬಹಳಷ್ಟು ರೈತರು ನೋಂದಾಯಿಸಿಕೊಳ್ಳಲು ಆಗಿಲ್ಲ. ಡಿ.15ಕ್ಕೆ ನೋಂದಣಿ ದಿನಾಂಕ ಮುಗಿದುಹೋಗಿದೆ. ಅದನ್ನು ಮತ್ತಷ್ಟು ವಿಸ್ತರಿಸಿ ಎಂದು ಯತೀಂದ್ರ ಸಲಹೆ ನೀಡಿದಾಗ ಪರಿಗಣಿಸುವುದಾಗಿ ಕೃಷಿ ಸಚಿವರು ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ