ಇಂದು ನಡೆದ ಕಾಂಗ್ರೇಸ್ ಶಾಸಕಾಂಗ ಸಭೆಗೆ ಕೆಲವು ಶಾಸಕರು ಮತ್ತು ಮುಖಂಡರು ಗೈರು

ಬೆಳಗಾವಿ,ಡಿ.18- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಅತೃಪ್ತ ಶಾಸಕರು, ಸಚಿವಾಕಾಂಕ್ಷಿಗಳು, ಹಿರಿಯ ಕಾಂಗ್ರೆಸ್ ಮುಖಂಡರು ಗೈರಾಗುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ಜಾತಕ ಪಕ್ಷಿಯಂತೆ ಕಾಯುತ್ತಿರುವ ಶಾಸಕರಾದ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ತುಕಾರಾಂ, ನಾಗೇಂದ್ರ ಅವರು ಗೈರಾಗಿದ್ದಾರೆ.

ಇನ್ನು ಬೆಳಗಾವಿ ರಾಜಕಾರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಸ್ಪಕ್ಷೇಪವನ್ನು ವಿರೋಧಿಸುತ್ತಲೇ ಬಂದಿರುವ ಸಚಿವ ರಮೇಶ್ ಜಾರಕಿಹೊಳಿ ಅವರು ಕೂಡ ಸಭೆಯಲ್ಲಿ ಹಾಜರಿರಲಿಲ್ಲ.

ಸಚಿವರು, ಬೆಳಗಾವಿ ಜಿಲ್ಲಾ ಉಸ್ತುವಾರಿಯೂ ಆಗಿರುವ ರಮೇಶ್ ಜಾರಕಿಹೊಳಿ ಅಧಿವೇಶನದಲ್ಲೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಬೆಳಗಾವಿಯ ಸಮಸ್ಯೆಗಳ ಕುರಿತಂತೆಯೂ ಗಂಭೀರ ಚರ್ಚೆ ನಡೆಸದೇ ಮೌನ ವಹಿಸಿದ್ದಾರೆ.

ಅಸಮಾಧಾನಿತರೆಂದೇ ಹೇಳಲಾದ ಬಿ.ಸಿ.ಪಾಟೀಲ್, ಸಿ.ಎಸ್.ಶಿವಳ್ಳಿ, ಎಂ.ಟಿ.ಬಿ ನಾಗರಾಜ್, ಸತೀಶ್ ಜಾರಕಿಹೊಳಿ, ಎಚ್.ಕೆ.ಪಾಟೀಲ್, ಎಸ್.ಆರ್.ಪಾಟೀಲ್ ಸಭೆಯಲ್ಲಿದ್ದರು.

ಡಾ.ಸುಧಾಕರ್ ಹಾಗೂ ಹ್ಯಾರೀಸ್ ಪೂರ್ವಾನುಮತಿ ಪಡೆದು ಸಭೆಗೆ ಗೈರಾಗಿದ್ದರು. 117 ಶಾಸಕರ ಪೈಕಿ ಸುಮಾರು 35 ಮಂದಿ ಶಾಸಕರು ವಿವಿಧ ಕಾರಣಗಳಿಗೆ ಗೈರಾಗಿದ್ದು, ಶಾಸಕರ ನಿರಾಸಕ್ತಿಯನ್ನು ತೋರಿಸುತ್ತಿತ್ತು.

ಸಭೆಯಲ್ಲಿ ಮುಖ್ಯವಾಗಿ ಸಚಿವ ಸಂಪುಟ ವಿಸ್ತರಣೆ ವಿಳಂಬದ ಕುರಿತು ಬಹುತೇಕ ಶಾಸಕರು ಮುನಿಸಿಕೊಂಡಿರುವುದೇ ಶಾಸಕಾಂಗ ಸಭೆಗೆ ಗೈರಾಗಲು ಕಾರಣ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಾಧ್ಯಕ್ಷ ಈಶ್ವರ ಖಂಡ್ರೆ, ಕೆ.ಜಾರ್ಜ್, ಡಿ.ಕೆ.ಶಿವಕುಮಾರ್ ವೇದಿಕೆಯಲ್ಲಿದ್ದರು.

ಸಾಮಾನ್ಯವಾಗಿ ಯಾವುದೇ ಅಧಿವೇಶನ ನಡೆಯುವ ಸಂದರ್ಭದಲ್ಲಿ ಆರಂಭದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಯಬೇಕು. ಕ್ಷೇತ್ರಗಳ ಸಮಸ್ಯೆ, ಶಾಸಕರ ಅನುದಾನ, ಉಭಯ ಸದನಗಳಲ್ಲಿ ನಡೆಸುವ ಚರ್ಚೆ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಬೇಕು.ಆದರೆ ಅಧಿವೇಶನದ ಕೊನೆಯ ಭಾಗದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿರುವುದಕ್ಕೆ ಹಲವರು ಬೇಸರ ಕೂಡ ವ್ಯಕ್ತಪಡಿಸಿದ್ದಾರೆ.

80 ಶಾಸರು, 39 ವಿಧಾನಪರಿಷತ್ ಸದಸ್ಯ ಬಲದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸುಮಾರು 100 ಮಂದಿ ಹಾಜರಾಗಿದ್ದರು. ಶಾಸಕಾಂಗ ಸಭೆಯ ಬಗ್ಗೆ ಆರಂಭದಿಂದಲೂ ಕುತೂಹಲ ಮೂಡಿತ್ತು. ಡಿ.8ರಂದು ಸಭೆ ನಿಗದಿಯಾಗಿತ್ತಾದರೂ ಅಧ್ಯಕ್ಷ ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈ ಕ್ರಮದಲ್ಲಿ ಪಕ್ಷದ ಮುಖಂಡರು ಆ ಸಂದರ್ಭದಲ್ಲೇ ಅಸಮಾಧಾನ ಹೊರಹಾಕಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ