![HDK-vidhanasabha--](http://kannada.vartamitra.com/wp-content/uploads/2018/05/HDK-vidhanasabha--678x381.jpg)
ಬೆಳಗಾವಿ, ಡಿ.18- ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚುವರಿಯಾಗಿ 500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.
ಸುವರ್ಣಸೌಧದಲ್ಲಿಂದು ಏರ್ಪಡಿಸಿದ್ದ ಅಲ್ಪಸಂಖ್ಯಾತರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನೀಡಿದ್ದ ಅನುದಾನಕ್ಕಿಂತ 500 ಕೋಟಿ ಹೆಚ್ಚು ಅನುದಾನವನ್ನು ಪ್ರಸ್ತುತ ಸರ್ಕಾರದಲ್ಲಿ ನೀಡಲಾಗಿದೆ.
ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರಲ್ಲ, ಕ್ರಿಶ್ಚಿಯನ್, ಜೈನ, ಸಿಖ್ ಸಮುದಾಯಗಳು ಸೇರುತ್ತವೆ. ಎಲ್ಲರಿಗೂ ಸೌಲಭ್ಯಗಳು ಹಂಚಿಕೆಯಾಗಬೇಕು. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದೆ ಬರಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ನಾನಾ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಲ್ಪಸಂಖ್ಯಾತರು ಎಲ್ಲ ಸಮಸ್ಯೆಗಳಿಂದ ಹೊರಬಂದು ನೆಮ್ಮದಿಯಿಂದ ಜೀವನ ನಡೆಸಬೇಕೆಂಬುದು ಸರ್ಕಾರದ ಆಶಯ, ಇದೇ ವೇಳೆ ಮುಖ್ಯಮಂತ್ರಿ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಜಾರಿಗೊಳಿಸಿರುವ ಯೋಜನೆಗಳ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶ ವಿ.ಗೋಪಾಲಗೌಡ, ಸಚಿವರಾದ ಡಾ.ಜಿ.ಪರಮೇಶ್ವರ್, ಜಮೀರ್ ಅಹಮ್ಮದ್ ಖಾನ್, ಕೆ.ಜೆ.ಜಾಜ್, ಯು.ಟಿ.ಖಾದರ್, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಸಿ.ಎಂ.ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು.
ನ್ಯಾ.ಗೋಪಾಲಗೌಡ ಮಾತನಾಡಿ, ಅಲ್ಪಸಂಖ್ಯಾತರಿಗೆ ನೀಡುವ ಸೌಲಭ್ಯಗಳು ಭಿಕ್ಷೆಯಲ್ಲ. ಅದು ಸಂವಿಧಾನದತ್ತ ಅಧಿಕಾರ. ರಾಜಕಾರಣಿಗಳು ದೇಶವನ್ನು ಬಹುಮತೀಯ ದೇಶ ಎಂದು ಅರ್ಥಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರ ಮೇಲೆ ಇತ್ತೀಚೆಗೆ ಗದಾ ಪ್ರಹಾರ ನಡೆಯುತ್ತಿದೆ. ನಮಗೂ ಹಕ್ಕುಗಳಿವೆ. ನಾವೂ ಈ ದೇಶದ ಪ್ರಜೆಗಳು ಎಂಬುದನ್ನು ತೋರಿಸಿಕೊಳ್ಳಬೇಕಾದ ಪರಿಸ್ಥಿತಿ ಅಲ್ಪಸಂಖ್ಯಾತರಿಗೆ ಬಂದಿರುವುದು ದುರದೃಷ್ಟಕರ ಎಂದು ವಿಷಾದಿಸಿದರು.
ಮುಸ್ಲಿಮರ ದೇಶಭಕ್ತಿಯನ್ನು ಟೀಕೆ ಮಾಡುವುದು, ಅವರನ್ನು ಎರಡನೆ ದರ್ಜೆ ಪ್ರಜೆಗಳಂತೆ ನೋಡುವುದು ಅಕ್ಷಮ್ಯ ಅಪರಾಧ. ಅವರಿಗೂ ಸಮಾನ ಅವಕಾಶಗಳು ಸಿಗಬೇಕು. ಪ್ರತಿಯೊಂದು ಧರ್ಮಗಳಿಗೂ ವೈಯಕ್ತಿಕ ಕಾನೂನುಗಳಿರುತ್ತವೆ. ವೈಯಕ್ತಿಕ ಕಾನೂನುಗಳ ಮೇಲೆ ಅತಿಕ್ರಮಣ ನಡೆಯುತ್ತಿದೆ. ಇದು ಸರಿಯಲ್ಲ. ಇತ್ತೀಚೆಗೆ ತ್ರಿವಳಿ ತಲಾಖ್ ಸಂಬಂಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಇದು ಸಂವಿಧಾನದ ವಿರೋಧವಾಗಿರುವುದರಿಂದ ಅಸಿಂಧುವಾಗುತ್ತದೆ. ಮುಸ್ಲಿಮರನ್ನು ಎರಡನೆ ಪ್ರಜೆಗಳಂತೆ ನೋಡುವ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಸರ್ಕಾರ ವಿವಿಧ ವಲಯಗಳಲ್ಲಿ ಮೀಸಲಾತಿ ಕೊಟ್ಟಿದೆ. ಆದರೆ, ಖಾಸಗಿ ವಲಯದಲ್ಲಿ ಮೀಸಲಾತಿ ನೀಡಿಲ್ಲ. ಇಲ್ಲಿ ಮುಸ್ಲಿಮರಿಗೆ, ದಲಿತರಿಗೆ ಆನ್ಯಾಯವಾಗುತ್ತದೆ. ಹಾಗಾಗಿ ಖಾಸಗಿ ವಲಯದಲ್ಲೂ ಮೀಸಲಾತಿ ಸಿಗಬೇಕು ಎಂದು ಹೇಳಿದರು.
ಸಚಿವ ಜಮೀರ್ ಅಹಮ್ಮದ್ ಮಾತನಾಡಿ, ಜನಸಂಖ್ಯೆಗನುಗುಣವಾಗಿ ಅನುದಾನ ನೀಡಬೇಕು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 2000 ಕೋಟಿ ನೀಡಿದ್ದರು. ಕುಮಾರಸ್ವಾಮಿಯವರು ಹೆಚ್ಚುವರಿಯಾಗಿ 500 ಕೋಟಿ ರೂ. ಕೊಟ್ಟಿದ್ದಾರೆ. ಶೇ.17ರಷ್ಟಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ 28 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಹೇಳಿದರು.
ಉಪಮುಖ್ಯಮಂತ್ರಿ ಪರಮೇಶ್ವರ್ ಮಾತನಾಡಿ, ಅಲ್ಪಸಂಖ್ಯಾತರನ್ನು ಎರಡನೆ ದರ್ಜೆ ನಾಗರಿಕರಂತೆ ನೋಡುವ ಕ್ರಮ ಖಂಡನೀಯ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಯುಪಿಎ ಸರ್ಕಾರ 2015ರಲ್ಲಿ ಸಾಚಾರ್ ಸಮಿತಿ ರಚಿಸಿತು. ಅವರ ಅಭ್ಯುದಯಕ್ಕೆ ಶಿಕ್ಷಣ, ಅನುದಾನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.