ಬೆಳಗಾವಿ, ಡಿ.18- ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ವಿಧಾನಸಭೆಯಿಂದ ಆಯ್ಕೆಯಾಗಿರುವ ಜೆಡಿಎಸ್‍ನ ಎಸ್.ಎಲ್.ಧರ್ಮೇಗೌಡ ನಾಮಪತ್ರ ಸಲ್ಲಿಸಿದ್ದು, ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಜೆಡಿಎಸ್ ಹಿರಿಯ ಮುಖಂಡರಾದ ಬಸವರಾಜ ಹೊರಟ್ಟಿ, ಎಸ್.ಎಲ್.ಭೋಜೇಗೌಡ, ಕೋನರೆಡ್ಡಿ ಸೇರಿದಂತೆ ಹಲವರೊಂದಿಗೆ ಇಂದು ವಿಧಾನಸಭೆ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರಿಗೆ ಇಂದು ಬೆಳಗ್ಗೆ 11.30ರಲ್ಲಿ ನಾಮಪತ್ರ ಸಲ್ಲಿಸಿದರು.
ಸಭಾಪತಿ ಹುದ್ದೆಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ನಾಳೆ ಬೆಳಗ್ಗೆ 10.30ಕ್ಕೆ ಉಪಸಭಾಪತಿ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ.
ಧರ್ಮೇಗೌಡ ಅವರಿಗೆ ಸೂಚಕರಾಗಿ ಜೆಡಿಎಸ್‍ನ ಭೋಜೇಗೌಡ, ಶ್ರೀಕರಂಠೇಗೌಡ, ಅಪ್ಪಾಜಿಗೌಡ, ಬಸವರಾಜ್ ಹೊರಟ್ಟಿ ಅವರು ಸಹಿ ಮಾಡಿದ್ದಾರೆ.
ಈ ಹಿಂದೆ ಉಪಸಭಾಪತಿ ಸ್ಥಾನಕ್ಕೆ ಶ್ರೀಕಂಠೇಗೌಡ ಮತ್ತು ಮರಿತಿಬ್ಬೇಗೌಡ ಹಾಗೂ ಅಪ್ಪಾಜಿಗೌಡ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ಜೆಡಿಎಸ್ ಧರ್ಮೇಗೌಡರಿಗೆ ಅವಕಾಶ ಕಲ್ಪಿಸಿದೆ.
ಈ ಮೂವರಲ್ಲಿ ಯಾರನ್ನೇ ಉಪಸಭಾಪತಿ ಮಾಡಿದರೆ ಅಸಮಾಧಾನ ಉಂಟಾಗಬಹುದು ಎಂಬ ಹಿನ್ನೆಲೆಯಲ್ಲಿ ಧರ್ಮೇಗೌಡರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ಅಸಮಾಧಾನವಿಲ್ಲ: ಸಭಾಪತಿ ಸ್ಥಾನ ಕೈ ತಪ್ಪಿದ್ದಕ್ಕೆ ಯಾವುದೇ ಅಸಮಾಧಾನವಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ನಾನು ಭಾವಿಸಿಲ್ಲ ಎಂದು ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ತಾರತಮ್ಯ ಎಂದು ಭಾವಿಸಬಾರದು ಎಂದು ಹೇಳಿದರು.
ನಾಮಪತ್ರ ಸಲ್ಲಿಸಿದ ಬಳಿಕ ಬಸವರಾಜ್ ಹೊರಟ್ಟಿ ಮಾತನಾಡಿ, ರಾಜಕಾರಣವೇ ಹೀಗೆ. ಇಲ್ಲಿ ಕೊನೆ ಕ್ಷಣದವರೆಗೂ ಏನೇ ಬೇಕಾದರೂ ಬದಲಾವಣೆಯಾಗುತ್ತದೆ. ಅಂತಿಮವಾಗಿ ನಾವೆಲ್ಲರೂ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಬೇಕೆಂದು ಹೇಳಿದರು.
ಮೊನ್ನೆ ಸಭಾಪತಿ ಸ್ಥಾನಕ್ಕೆ ನನ್ನ ಹೆಸರು ಕೇಳಿಬಂದಿತ್ತು. ಕೊನೆ ಕ್ಷಣದಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಒಲಿಯಿತು. ಇದೇ ರೀತಿ ಉಪಸಭಾಪತಿ ಸ್ಥಾನಕ್ಕೆ ಶ್ರೀಕಂಠೇಗೌಡ ಹಾಗೂ ಅಪ್ಪಾಜಿಗೌಡ ಅವರ ಹೆಸರುಗಳಿದ್ದವು. ಕೊನೆ ಕ್ಷಣದಲ್ಲಿ ಧರ್ಮೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಹೀಗೆ ರಾಜಕಾರಣದಲ್ಲಿ ಕೆಲವು ಬಾರಿ ದಿಢೀರನೆ ಬದಲಾವಣೆಯಾಗುತ್ತವೆ ಎಂದರು.