ಬೆಳಗಾವಿ,ಡಿ.18- ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸದ ಶುಲ್ಕವನ್ನು ಏರಿಕೆ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿಧಾನಪರಿಷತ್ನಲ್ಲಿಂದು ತಿಳಿಸಿದರು.
ಪ್ರಸ್ತುತ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ಗೆ ಪ್ರವೇಶ ಶುಲ್ಕವಾಗಿ 17 ಸಾವಿರ ನಿಗದಿ ಪಡಿಸಲಾಗಿದೆ. ಬರುವ ವರ್ಷದಿಂದ ಇದರ ಮೊತ್ತವನ್ನು 50 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು. ಇನ್ನು ಪಿಜಿ ಕೋರ್ಸ್ಗಳಿಗೆ 50 ಸಾವಿರದಿಂದ 3 ಲಕ್ಷಕ್ಕೆ ಏರಿಕೆ ಮಾಡಲಾಗುವುದು. ಮುಂದಿನ ವರ್ಷದಿಂದ ಹೊಸ ಶುಲ್ಕ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನ್ವಯವಾಗಲಿದೆ ಎಂದರು.
ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಸಂಕನೂರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇದ್ದ 150 ಸೀಟುಗಳನ್ನು 250ಕ್ಕೆ ಹೆಚ್ಚಳ ಮಾಡಲಾಗುವುದು ಎಂದರು.
ಇನ್ನು ಮುಂದೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿ(ಎನ್ಆರ್ಐ) ಸೀಟುಗಳನ್ನು ಪ್ರಾರಂಭ ಮಾಡಲಾಗುವುದು. ಇದರಿಂದ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಹಾಗೂ ಕಾಲೇಜುಗಳ ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.
ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ 2006ರ ನಂತರ ನೇಮಕಗೊಂಡಿರುವ ಪ್ರಾಧ್ಯಾಪಕರು ಮತ್ತು ಇತರೆ ಸಿಬ್ಬಂದಿಗೆ ನೂತನ ಪಿಂಚಣಿ ಸೌಲಭ್ಯ ನೀಡಬೇಕೆಂಬುದು ಸರ್ಕಾರದ ಆಶಯವಾಗಿದೆ. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಹತ್ತು ಸಾವಿರಕ್ಕೆ , 7 ಸಾವಿರಕ್ಕೆ ಕೆಲಸ ಮಾಡುತ್ತಾರೆ. ಪಿಂಚಣಿ ನೀಡಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದೆ. ಇದನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಲಿದೆ ಎಂಬ ಭರವಸೆ ನೀಡಿದರು.
ಇಂದಿರಾಗಾಂಧಿ, ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಈಗಾಗಲೇ ನೂತನ ಪಿಂಚಣಿ ಯೋಜನೆಯನ್ನು ನೀಡಲಾಗುತ್ತಿದೆ ಎಂದು ಸದಸ್ಯ ಸಂಕನೂರು ಸಚಿವರ ಗಮನಕ್ಕೆ ತಂದಾಗ ಇದಕ್ಕೆ ಸದಸ್ಯರಾದ ನಾರಾಯಣಸ್ವಾಮಿ ಆಯನೂರು ಮಂಜುನಾಥ್ ಸೇರಿದಂತೆ ಮತ್ತಿತರರು ದನಿಗೂಡಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಹಣಕಾಸು ಇಲಾಖೆಗಳ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುವ ಆಶ್ವಾಸನೆಯನ್ನು ಸಚಿವರು ನೀಡಿದರು.