ಮಂಗಳೂರು ವಿವಿ ಅಕ್ರಮ ಬಗ್ಗೆ ತನಿಖೆ ನಡೆಸಿ 3 ತಿಂಗಳಿನೊಳಗೆ ಕ್ರಮ, ಸಚಿವ ಜಿ.ಟಿ.ದೇವೆಗೌಡ

ಬೆಳಗಾವಿ, ಡಿ.18- ಮಂಗಳೂರು ವಿವಿಯ ಪರೀಕ್ಷಾ ನಿರ್ವಹಣೆ ಗುತ್ತಿಗೆ, ಸೋಲಾರ್ ಉಪಕರಣ, ಕಂಪ್ಯೂಟರ್ ಹಾಗೂ ಸಿಸಿಟಿವಿ ಖರೀದಿ, ಅಕ್ರಮ ನೇಮಕಾತಿಗಳ ಬಗ್ಗೆ ತನಿಖೆಗೊಳಪಡಿಸಿ 3 ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಂಗಳೂರು ವಿವಿಯ ಅಕ್ರಮದ ಬಗ್ಗೆ ಆರೋಪ ಮಾಡಿರುವುದು ವರದಿಯಾಗಿದೆ. ಅದರ ಬಗ್ಗೆ ವಿವಿಯಿಂದ ವರದಿ ಪಡೆಯಲಾಗಿದೆ. ಆದರೆ ಆರೋಪದ ಬಗ್ಗೆ ಯಾವುದೇ ಲಿಖಿತ ದೂರು ಬಂದಿಲ್ಲ ಎಂದರು.

ಈ ಹಂತದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಅವರು, ವಿವಿ ಮೇಲಿರುವ ಆರೋಪದ ಬಗ್ಗೆ 3ನೇ ವ್ಯಕ್ತಿಯಿಂದ ವರದಿ ಪಡೆಯಬೇಕು ಎಂದರು. ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ ವಿವಿ ಮೇಲಿರುವ ಆರೋಪದ ಬಗ್ಗೆ ಯಾವ ರೀತಿ ವಿಚಾರಣೆಗೊಳಪಡಿಸಬೇಕು, ಕಾನೂನಿನಲ್ಲಿ ಯಾವ ರೀತಿ ಅವಕಾಶಗಳಿವೆ ಎಂಬ ಸಮಾಲೋಚಿಸಿ ಎಂದು ಸಲಹೆ ಮಾಡಿದರು.

ಕಡೂರು ತಾಲ್ಲೂಕಿನ ಕುರುಬರಹಳ್ಳಿಯಲ್ಲಿ ಕುವೆಂಪು ವಿವಿಯ ಸ್ನಾತಕೋತ್ತರ ಮತ್ತು ಸಂಶೋಧನ ಕೇಂದ್ರವನ್ನು ಸ್ಥಾಪಿಸಲು ಶೀಘ್ರದಲ್ಲೇ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬೆಳ್ಳಿ ಪ್ರಕಾಶ್ ಅವರ ಪ್ರಶ್ನೆಗೆ ಜಿಟಿಡಿ ಉತ್ತರಿಸಿದರು.

ಸ್ನಾತಕೋತ್ತರ ಕೇಂದ್ರ ಸ್ಥಾಪಿಸಲು 60 ಎಕರೆ ಜಮೀನು ಮಂಜೂರಾಗಿದೆ. ಕಳೆದ ಸಾಲಿನಲ್ಲಿ ನಾಲ್ಕೂವರೆ ಕೋಟಿ ರೂ. ಬಿಡುಗಡೆಯಾಗಿದ್ದರೂ ಖರ್ಚಾಗಿಲ್ಲ ಎಂದರು.

ಕುವೆಂಪು ವಿವಿಯಲ್ಲಿ ಖಾಲಿ ಇರುವ 21 ಬೋಧಕ ಮತ್ತು ಮೂರು ಬೋಧಕೇತರ ಹುದ್ದೆಗಳನ್ನು ನೇಮಕ ಮಾಡಲು ಆರ್ಥಿಕ ಇಲಾಖೆ ಸಮ್ಮತಿ ನೀಡಿದ್ದು, ನೇರ ನೇಮಕಾತಿಗೆ ಸರ್ಕಾರದಿಂದ ಅನುಮತಿಯನ್ನೂ ನೀಡಲಾಗಿದೆ. ಉಳಿದ 13 ಬೋಧಕರ ಮತ್ತು 252ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ