ನವದೆಹಲಿ: 2017-18ನೇ ಸಾಲಿನಲ್ಲಿ ಬಿಜೆಪಿ ಒಟ್ಟು 1,027 ಕೋಟಿ ರೂ. ಆದಾಯ ಗಳಿಕೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಒಟ್ಟು ಆದಾಯದಲ್ಲಿ ಕೊಂಚ ಇಳಿಕೆ ಆಗಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. 2017-18ನೇ ಸಾಲಿನಲ್ಲಿ ಬಿಜೆಪಿ 1,027 ಕೋಟಿ ರೂ. ಗಳಿಕೆ ಮಾಡಿದ್ದು, ಅದರಲ್ಲಿ ಶೇ. 74 ಅಂದರೆ, 758 ಕೋಟಿ ರೂ. ಹಣವನ್ನು ವ್ಯಯಿಸಿದೆ. 2016-17ನೇ ಸಾಲಿನಲ್ಲಿ ಬಿಜೆಪಿ ಆದಾಯ 1,034 ಕೋಟಿ ರೂ. ಆಗಿತ್ತು. ಹಾಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯದಲ್ಲಿ 7 ಕೋಟಿ ರೂ. ಇಳಿಕೆ ಆಗಿದೆ.
ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲೊಂದಾಗಿರುವ ಕಾಂಗ್ರೆಸ್ ಇನ್ನಷ್ಟೇ ಆದಾಯ ವರದಿಯನ್ನು ಸಲ್ಲಿಕೆ ಮಾಡಬೇಕಿದೆ. ಇನ್ನು, ಬಿಎಸ್ಪಿ 51.7 ಕೋಟಿ ರೂ. ಗಳಿಕೆ ಮಾಡಿದ್ದು, ಅದರಲ್ಲಿ 14.78 ಕೋಟಿ ರೂ. ಮಾತ್ರ ಬಳಕೆ ಆಗಿದೆ. ಎನ್ಸಿಪಿ ಪಕ್ಷ ಮಾತ್ರ ಗಳಿಕೆಗಿಂತ ಹೆಚ್ಚಿನ ಹಣವನ್ನು ವ್ಯಯಿಸಿದೆ. 8.15 ಕೋಟಿ ರೂ. ಆದಾಯ ಬಂದರೆ, ಅದರಲ್ಲಿ 8.84 ಕೋಟಿ ರೂ. ಖರ್ಚುಮಾಡಿದೆ. 6 ರಾಷ್ಟ್ರೀಯ ಪಕ್ಷಗಳು ಶೇ. 86.91 ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹವಾಗಿದೆ.
2017-18 ಅವಧಿಯಲ್ಲಿ 210 ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ಗಳ ಮೂಲಕವೇ ಸಂಗ್ರಹ ಮಾಡಿರುವುದಾಗಿ ಬಿಜೆಪಿ ಹೇಳಿದೆ. ಕೆಲ ಸಂಸ್ಥೆಗಳು ಬಿಜೆಪಿಗೆ ಕಮಿಷನ್ಗಳನ್ನು ಚುನಾವಣಾ ಬಾಂಡ್ಗಳ ಮೂಲಕ ನೀಡಿವೆ ಎಂದು ವಿಪಕ್ಷಗಳು ಆರೋಪಿಸಿವೆ.