ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಗಿತಗೊಳಿಸುವಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒತ್ತಾಯ

ಬೆಳಗಾವಿ(ಸುವರ್ಣಸೌಧ), ಡಿ.18-ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸರ್ಕಾರದ ಗಮನ ಸೆಳೆದು ಕೂಡಲೇ ತ್ಯಾಜ್ಯ ವಿಲೇವಾರಿ ಘಟಕವನ್ನು ಕೂಡಲೇ ಸ್ಥಗಿತ ಗೊಳಿಸುವಂತೆ ಒತ್ತಾಯಿಸಿದರು.

ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ತುರುಮುರಿ ಗ್ರಾಮದಲ್ಲಿ 66 ಎಕರೆ ವಿಸ್ತೀರ್ಣದಲ್ಲಿ 2007ರಲ್ಲೇ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿದೆ. ಆ ಘಟಕದಿಂದ ಕೆಟ್ಟ ದುರ್ವಾಸನೆ ಹೊರಬರುತ್ತಿದ್ದು, ಅಕ್ಕಪಕ್ಕದ ಗ್ರಾಮಗಳ ಜನ ತೊಂದರೆಗೀಡಾಗಿದ್ದಾರೆ. ಕುಡಿಯುವ ನೀರು ಮಲಿನವಾಗಿದೆ. ವಾಯು ಮಾಲಿನ್ಯ ಮಂಡಳಿ ಅನುಮತಿಯನ್ನೂ ಪಡೆಯದೆ ತ್ಯಾಜ್ಯ ವಿಲೇವಾರಿ ಘಟಕ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಆಗ ಮಧ್ಯೆ ಪ್ರವೇಶಿಸಿದ ಸ್ಪೀಕರ್ ರಮೇಶ್‍ಕುಮಾರ್ ಅವರು, ಪೌರಾಡಳಿತ ಸಚಿವ ರಮೇಶ್ ಜಾರಕಿ ಹೊಳಿಗೆ ಗಂಟಲು ನೋವು, ಜ್ವರ ಅವರು ಅನುಮತಿ ಪಡೆದು ಗೈರು ಹಾಜರಾಗಿದ್ದಾರೆ. ಅವರ ಪರವಾಗಿ ನಗರಪಾಲಿಕೆ ಸಚಿವ ಯು.ಟಿ.ಖಾದರ್ ಉತ್ತರ ನೀಡಲಿ ಎಂದು ಸೂಚನೆ ನೀಡಿದರು.
ಸ್ಥಳ ಪರಿಶೀಲನೆ ನಡೆಸಿ ಪರಿಸರ ಮಾಲಿನ್ಯದ ಬಗ್ಗೆ ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ