ಬೆಳಗಾವಿ(ಸುವರ್ಣಸೌಧ), ಡಿ.18-ಬೆಂಗಳೂರಿನ ವಿಧಾನಸೌಧ ಬೆಳಗಾವಿಯ ಸುವರ್ಣ ಸೌಧದ ವಿಧಾನಸಭೆ ಸಭಾಂಗಣದಲ್ಲಿ ಇನ್ನೊಂದು ವಾರದೊಳಗಾಗಿ ಅಂಬೇಡ್ಕರ್ ಭಾವಚಿತ್ರವನ್ನು ಅನಾವರಣಗೊಳಿಸುವುದಾಗಿ ಸ್ಪೀಕರ್ ರಮೇಶ್ಕುಮಾರ್ ಭರವಸೆ ನೀಡಿದರು.
ವಿಧಾನಸಭೆ ಶೂನ್ಯವೇಳೆಯಲ್ಲಿ ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಅನ್ನದಾನಿ ಅವರು ವಿಷಯ ಪ್ರಸ್ತಾಪಿಸಿ ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ದೇಶವನ್ನು ದಾಸ್ಯ ಮುಕ್ತಗೊಳಿಸಿದ್ದರು. ಅವರ ಭಾವಚಿತ್ರ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿದೆ. ದೇಶಕ್ಕೆ ಸಂವಿಧಾನ ರಚಿಸಿಕೊಟ್ಟ ಅಂಬೇಡ್ಕರ್ ಅವರ ಭಾವಚಿತ್ರವಿಲ್ಲ ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಉತ್ತರನೀಡಿದ ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ಅವರು, ಇದು ನನ್ನ ವ್ಯಾಪ್ತಿಗೆ ಒಳಪಡುತ್ತದೆ. ಕೂಡಲೇ ಕ್ರಮಕೈಗೊಳ್ಳುತ್ತೇನೆ. ಈಗಾಗಲೇ ವಿಳಂಬವಾಗಿದೆ. ಇದಕ್ಕೆ ಕ್ಷಮೆಕೇಳುತ್ತೇನೆ. ವಾರದೊಳಗಾಗಿ ಬೆಂಗಳೂರು ಮತ್ತು ಬೆಳಗಾವಿ ಎರಡೂ ವಿಧಾನಸಭೆಗಳ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಲಾಗುವುದು. ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಉಲ್ಲೇಖಿಸಿ ವಿಧಾನಪರಿಷತ್ ಸಭಾಪತಿಯವರಿಗೂ ಇದೇ ದಿನ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಕೂಡಲೇ ವಿಧಾನಸಭೆ ಕಾರ್ಯದರ್ಶಿ ಮೂರ್ತಿಯವರನ್ನು ಕರೆದು ಅಂಬೇಡ್ಕರ್ ಅವರು ಲಕ್ಷಣವಾಗಿ ಕಾಣುವ ಭಾವಚಿತ್ರದ ಸ್ಯಾಂಪಲ್ಗಳನ್ನು ತಕ್ಷಣವೇ ತರಿಸಿ ಸೂಕ್ತವಾದುದನ್ನು ಆಯ್ಕೆ ಮಾಡಿ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು.