ಹಿಂಗಾರು ಮಳೆ ಕೊರತೆ ಹಿನ್ನಲೆ, ಹಿಂಗಾರು ಹಂಗಾಮಿನ ಬರ ಪ್ರದೇಶಗಳನ್ನು ಘೋಷಣೆ ಮಾಡಲು ಸರ್ಕಾರ ಸಿದ್ಧತೆ

ಬೆಂಗಳೂರು,ಡಿ.17- ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿ ಮುಂದುವರೆದ ಬೆನ್ನಲ್ಲೆ ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಉಂಟಾಗಿ ರಾಜ್ಯದ ಬಹುತೇಕ ಭಾಗ ಬರದ ಛಾಯೆಗೆ ಸಿಲುಕಿದೆ.

ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗದೆ ಹಿಂಗಾರಿನಲ್ಲಿ ಬಿತ್ತಿದ ಬೆಳೆಯು ಒಣಗುತ್ತಿದೆ.ಹೀಗಾಗಿ ರಾಜ್ಯ ಸರ್ಕಾರ ಹಿಂಗಾರು ಹಂಗಾಮಿನ ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಲು ಸಿದ್ಧತೆ ನಡೆಸಿದೆ.

ಈಗಾಗಲೇ ಮುಂಗಾರು ಹಂಗಾಮಿನಲ್ಲಿ 100 ತಾಲ್ಲೂಕುಗಳನ್ನು ಘೋಷಣೆ ಮಾಡಿ ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಅದೇ ರೀತಿ ಹಿಂಗಾರು ಹಂಗಾಮಿನಲ್ಲೂ ಡಿಸೆಂಬರ್ ಅಂತ್ಯದ ವೇಳೆಗೆ ಬರಪೀಡಿತ ಪ್ರದೇಶಗಳ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜನವರಿ ಮೊದಲ ವಾರದಲ್ಲಿ ಹಿಂಗಾರು ಹಂಗಾಮಿನ ಬರಪೀಡಿತ ಪ್ರದೇಶಗಳಿಗೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೃಷಿ, ತೋಟಗಾರಿಕೆ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಹಿಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿ ಮಾಹಿತಿ ಕಲೆ ಹಾಕಲು ಸೂಚಿಸಲಾಗಿದ್ದು, ಜಿಲ್ಲಾವಾರು ಹಾಗೂ ತಾಲ್ಲೂಕುವಾರು ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಹಿಂಗಾರು ಹಂಗಾಮಿನಲ್ಲೂ ರಾಜ್ಯ ಸರ್ಕಾರದ ಮುಕ್ಕಾಲು ಭಾಗ ಬರದ ಛಾಯೆಗೆ ಸಿಲುಕಿದ್ದು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಯಾಗಲಿದೆ.

ಈಗಾಗಲೇ ಹಿಂಗಾರು ಹಂಗಾಮಿನಲ್ಲಿ ಬಿದ್ದಿರುವ ಮಳೆಯ ಪ್ರಮಾಣ, ಬಿತ್ತನೆಯಾಗಿರುವ ಬೆಳೆ, ಹಾನಿಗೀಡಾಗಿರುವ ಬೆಳೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಮಾಹಿತಿಗಳನ್ನು ರಾಜ್ಯ ಸರ್ಕಾರ ತಾಲ್ಲೂಕು ವಾರು ಮಾಹಿತಿ ಪಡೆದಿದೆ.

ಹಿಂಗಾರು ಹಂಗಾಮಿನ ಬರಪೀಡಿತ ಘೋಷಣೆಗೆ ಸಿದ್ದತೆ ನಡೆಸುತ್ತಿದ್ದು ಡಿಸೆಂಬರ್ ಅಂತ್ಯದಲ್ಲಿ ಅಧಿಕೃತವಾಗಿ ಬಡಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ