ಬೆಂಗಳೂರು,ಡಿ.17- ರಫೇಲ್ ಯುದ್ಧ ವಿಮಾನ ಖರೀದಿಗೆ ಸುಪ್ರೀಂ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ಬಿಜೆಪಿ ರಫೆಲ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ದೇಶಾದ್ಯಂತ 70 ಕಡೆಗಳಲ್ಲಿ ಸುದ್ದಿಗೋಷ್ಠಿ ನಡೆಸಿದೆ.
ಅದರಂತೆ ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಹಿರಿಯ ಬಿಜೆಪಿ ಮುಖಂಡ ಸಂದೀಪ್ ಪಾತ್ರ ಮಾತನಾಡಿ, ರಫೇಲ್ ಕುರಿತ ಸುಪ್ರೀಂ ತೀರ್ಪು ಸತ್ಯಕ್ಕೆ ಸಂದ ಜಯ ಎಂದರು.
ಕಾಂಗ್ರೆಸ್ ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿತು.ಇಲ್ಲಸಲ್ಲದ್ದನ್ನು ಹೇಳಿ ಬಿಜೆಪಿಯನ್ನು ಹಣಿಯುವ ಪ್ರಯತ್ನಕ್ಕೆ ಕೈ ಹಾಕಿತು.ಆದರೆ ಸುಪ್ರೀಂ ತೀರ್ಪು ಕಾಂಗ್ರೆಸ್ನ ನಿಜ ಬಣ್ಣ ಬಯಲುಗೊಳಿಸಿ, ಕೇಂದ್ರ ಪಾರದರ್ಶಕ ಆಡಳಿತವನ್ನು ಎತ್ತಿ ಹಿಡಿದಿದೆ ಎಂದರು.
ಸುಖಾಸುಮ್ಮನೆ ರಫೇಲ್ ಕುರಿತು ವಿವಾದ ಸೃಷ್ಠಿಸಿದ ರಾಹುಲ್ ಇದೀಗ ದೇಶದ ಜನರ ಕ್ಷಮೆ ಕೇಳಬೇಕಿದೆ ಎಂದರು.
ಕಾಂಗ್ರೆಸ್ನದ್ದು ಭ್ರಷ್ಟಾಚಾರದ ಇತಿಹಾಸವಿದೆ. ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಕಮಲನಾಥ್ ವಿರುದ್ಧ ಎಸ್ಐಟಿ ತನಿಖೆ ನಡೆಯುತ್ತಿದೆ.ಇದು ಇನ್ನೂ ಇತ್ಯರ್ಥವಾಗದೇ ಇದ್ದರೂ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿಗಾದಿಗೇರಿಸಿದೆ.ಮುಂದಿನ ದಿನಗಳಲ್ಲಿ ಬಿಜೆಪಿ ಈ ಬಗ್ಗೆ ತೀವ್ರ ಹೋರಾಟ ನಡೆಸಲಿದೆ ಎಂದರು.
ಸುಪ್ರೀಂಕೋರ್ಟ್ ರಫೇಲ್ ಕುರಿತು ಕೂಲಂಕಷವಾಗಿ ವಿಚಾರಣೆ ನಡೆಸಿ ಸತ್ಯವನ್ನು ಎತ್ತಿ ಹಿಡಿದಿರುವುದಕ್ಕೆ ಸಂದೀಪ್ ಪಾತ್ರ ಧನ್ಯವಾದ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಹಾಜರಿದ್ದರು.