ಬೆಳಗಾವಿ, ಡಿ.17- ಗಂಗಾ ಕಲ್ಯಾಣ ಯೋಜನೆ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರು ಪ್ರಶ್ನೋತ್ತರ ಅವಧಿಯಲ್ಲೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಪ್ರಾಣೇಶ್ ಅವರ ಪ್ರಶ್ನೆಗೆ, ಸಚಿವ ಪ್ರಿಯಾಂಕ ಖರ್ಗೆ ಉತ್ತರಿಸಿ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರಗಳು ನಮ್ಮ ಗಮನಕ್ಕೆ ಬಂದಿವೆ. ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾರೇ ಇದ್ದರೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ. ಒಂದು ವೇಳೆ ಈ ವರದಿಯಲ್ಲಿ ತೃಪ್ತಿ ಇಲ್ಲದಿದ್ದರೆ ನಂತರ ಸದನ ಸಮಿತಿ ರಚನೆ ಮಾಡುವುದಾಗಿ ಹೇಳಿದರು.
ಇದಕ್ಕೆ ಕೆರಳಿದ ಬಿಜೆಪಿ ಸದಸ್ಯರು, ಅವ್ಯವಹಾರ ಪತ್ತೆಯಾಗಬೇಕಾದರೆ ಸದನ ಸಮಿತಿ ರಚನೆ ಮಾಡುವುದೇ ಸರಿಯಾದ ಕ್ರಮ. ನೀವು ಯಾರನ್ನು ರಕ್ಷಣೆ ಮಾಡಲು ಹೊರಟ್ಟಿದ್ದೀರಿ ಎಂದು ಸಚಿವರ ಮೇಲೆ ಬಿಜೆಪಿ ಸದಸ್ಯರು ಮುಗಿಬಿದ್ದರು.
ತಪ್ಪಿತಸ್ಥರು ಯಾರೇ ಇದ್ದರೂ ನಾನು ಕ್ರಮ ಕೈಗೊಳ್ಳುವಾಗ ಹಿಂದೆ ಮುಂದೆ ನೋಡುವುದಿಲ್ಲ. ನಮ್ಮ ಇಲಾಖೆಯಲ್ಲೇ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಸಲಹೆಗಾರರು, ಕಾರ್ಯದರ್ಶಿಗಳು, ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳ ವರ್ಗ ಇದೆ. ನನಗೆ ಸದನ ಸಮಿತಿ ರಚಿಸಲು ಯಾವ ಮುಜುಗರವೂ ಇಲ್ಲ. ಮೊದಲು ಇಲಾಖಾ ವರದಿ ಬರಲಿ. ತಪ್ಪಿತಸ್ಥರ ಮೇಲೆ ಯಾವ ಕ್ರಮ ಜರುಗಿಸಬೇಕು ಎಂದು ವರದಿ ಶಿಫಾರಸ್ಸು ಮಾಡುತ್ತದೆಯೋ ಅದಕ್ಕೆ ಸಿದ್ದನಿದ್ದೇನೆ. ನಿಮಗೆ ಈ ವರದಿ ತೃಪ್ತಿದಾಯಕ ಇಲ್ಲದಿದ್ದರೆ ಸದನ ಸಮಿತಿ ರಚನೆ ಮಾಡಲು ನನ್ನ ಅಭ್ಯಂತರವಿಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳಿದರು.
ಆಗ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಒಂದು ಕ್ಷೇತ್ರದಲ್ಲಿ 1800 ಬೋರ್ವೆಲ್ಗಳನ್ನು ಕೊರೆಸಿ 1.80 ಕೋಟಿ ಹಣವನ್ನು ಭ್ರಷ್ಟಾಚಾರ ಮಾಡಲಾಗಿದೆ. ಈ ಬಗ್ಗೆ ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖ ಅಧಿಕಾರಿಗಳ ಮೇಲೆ ಗುರುತರ ಆರೋಪವಿದೆ. ಇಲಾಖಾ ಹಂತದ ತನಿಖೆ ನಡೆದರೆ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಗಂಗಾಕಲ್ಯಾಣ ಎಂಬುದು ಯೋಜನೆ. ಇಲ್ಲಿ ಹೇಳುವವರು ಇಲ್ಲ, ಕೇಳುವವರು ಇಲ್ಲ. ಬೋರ್ವೆಲ್ ಕೊರೆಸದೆ ನಕಲಿ ಬಿಲ್ ಸೃಷ್ಟಿಸಿದ್ದಾರೆ. ಬೇರೋಬ್ಬರ ಹೆಸರಿನಲ್ಲಿ ದುಡ್ಡು ಹೊಡೆಯುವುದಾದರೆ ಯಾವ ಕಾರಣಕ್ಕಾಗಿ ಸದನ ಸಮಿತಿ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಆಗ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿ, ಪ್ರತಿ ಶುಕ್ರವಾರ ಗಂಗಾಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಸಭೆ ನಡೆಯುತ್ತದೆ. ಇದರಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರರು ಪಾಲ್ಗೊಳ್ಳುತ್ತಾರೆ.ಎಸ್ಸಿ-ಎಸ್ಟಿ ಸಮಿತಿ ತನಿಖೆ ಮಾಡುತ್ತಿದೆ.ನಿಷ್ಪಕ್ಷಪಾತ ತನಿಖೆ ನಡೆಸಲು ಸರ್ಕಾರ ಸಿದ್ದವಿದೆ.ತನಿಖೆ ನಡೆಯದೆ ಆರೋಪ ಸಾಬೀತಾಗದೆ ನೇಣು ಹಾಕಿ ಎಂದು ಹೇಳಿದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಈ ವೇಳೆ ಕಾಂಗ್ರೆಸ್ನ ಸದಸ್ಯ ನಾಸೀರ್ ಹುಸೇನ್ ಮಾತನಾಡಿ, ಸಚಿವರ ದಕ್ಷತೆ ಬಗ್ಗೆ ನಮಗೆ ಸಂದೇಹವಿಲ್ಲ ಅವರು ಇಲಾಖೆಗೆ ಕಾಯಕಲ್ಪ ನೀಡಲು ಮುಂದಾಗಿದ್ದಾರೆ. ಆದರೆ ಕೆಲವು ಭ್ರಷ್ಟ ಅಧಿಕಾರಿಗಳಿಂದ ಕೆಟ್ಟ ಹೆಸರು ಬಂದಿದೆ.ಅಗತ್ಯವಾದರೆ ಸದನಸಮಿತಿ ರಚನೆ ಮಾಡಿ ಎಂದು ಸಲಹೆ ನೀಡಿದರು.
ಸದಸ್ಯೆ ಜಯಮಾಲ ರಾಮಚಂದ್ರ ಮಾತನಾಡಿ, ಇಲಾಖೆ ವತಿಯಿಂದ ತನಿಖೆ ನಡೆಸುವುದಾಗಿ ಸಚಿವರು ಹೇಳಿದ್ದಾರೆ.ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವುದು ಸರಿಯಲ್ಲ. ದಯವಿಟ್ಟು ಧರಣಿ ಹಿಂಪಡೆದು ಸುಗಮ ಕಲಾಪಕ್ಕೆ ಅನುವು ಮಾಡಿ ಕೊಡಿ ಎಂದು ಮನವಿ ಮಾಡಿದರು.
ಜೆಡಿಎಸ್ನ ಶ್ರೀಕಂಠೇಗೌಡ, ಭೋಜೇಗೌಡ ಇದಕ್ಕೆ ದನಿಗೂಡಿಸಿ ಈಗಾಗಲೇ ಸಚಿವರು ಇಲಾಖೆ ಮಟ್ಟದಲ್ಲಿ ತನಿಖೆ ನಡೆಸುತ್ತೇನೆ ಎಂದು ಹೇಳಿರುವುದರಿಂದ ಸದನ ಸಮಿತಿ ರಚನೆ ಮಾಡಬೇಕೆಂದು ಪಟ್ಟುಹಿಡಿಯುವುದು ಸರಿಯಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ಇಂಥದ್ದೇ ಸಮಿತಿ ರಚನೆ ಮಾಡಬೇಕೆಂದು ಪಟ್ಟು ಹಿಡಿಯುವುದು ಎಷ್ಟರ ಮಟ್ಟಿಗೆ ಸರಿ.ಪ್ರತಿಭಟನೆಯನ್ನು ಕೈಬಿಟ್ಟು ಪ್ರಶ್ನೋತ್ತರ ಅವಧಿಗೆ ಸಹಕರಿಸಿ ಎಂದು ಇಬ್ಬರೂ ಸದಸ್ಯರು ಸಭಾಪತಿಗಳಿಗೆ ಮನವಿ ಮಾಡಿಕೊಂಡರು.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಈ ಅಧಿವೇಶನ ಕರೆದಿರುವುದು ಉಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು. ಅಧಿವೇಶನದ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು.ಎಲ್ಲರೂ ಧರಣಿಯನ್ನು ಕೈಬಿಟ್ಟು ತಮ್ಮ ತಮ್ಮ ಸ್ವಸ್ಥಾನಗಳಿಗೆ ಮರಳುವಂತೆ ಸೂಚಿಸಿದರು.
ಆದರೆ ಪ್ರತಿಪಕ್ಷದ ಸದಸ್ಯರು ಧರಣಿಯನ್ನು ಮುಂದುವರೆಸಿದ್ದರಿಂದ ಕಲಾಪವನ್ನು ಅರ್ಧಗಂಟೆ ಮುಂದೂಡಿದರು.