ಚಾಮುಂಡೇಶ್ವರಿ ಬ್ಯೂಲ್ಡ್ ಟೆಕ್ ಕಂ. ಒತ್ತುವರಿ ಮಾಡಿಕೊಂಡಿರುವ ಜಮೀನಿಗೆ ಹಣ ಪಾವತಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು, ಸಚಿವ ಆರ್.ವಿ.ದೇಶಪಾಂಡೆ

ಬೆಳಗಾವಿ(ಸುವರ್ಣಸೌಧ), ಡಿ.17- ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಶಾನಮಂಗಲ, ಬಿಲ್ಲಕೆಂಪನಹಳ್ಳಿ ಮತ್ತು ಬಾಣಂದೂರು ಗ್ರಾಮಗಳಲ್ಲಿ ಚಾಮುಂಡೇಶ್ವರಿ ಬ್ಯೂಲ್ಡ್ ಟೆಕ್ ಕಂಪೆನಿ ಒತ್ತುವರಿ ಮಾಡಿರುವ ಸರ್ಕಾರಿ ಜಮೀನಿಗೆ ನಿರ್ದಿಷ್ಟ ಹಣ ಪಾವತಿಸದಿದ್ದರೆ ಜಮೀನನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅವರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಾಮುಂಡೇಶ್ವರಿ ಬ್ಯೂಲ್ಡ್‍ಟೆಕ್ ಸಂಸ್ಥೆ ಹೀಗಲ್ ಟನ್ ಪ್ರಾಜೆಕ್ಟ್‍ಗಾಗಿ 106 ಎಕರೆ 12 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದು, ಇದರಲ್ಲಿ 20 ಎಕರೆ 33 ಗುಂಟೆ ಜಮೀನನ್ನು ಸರ್ಕಾರ ವಶಕ್ಕೆ ಪಡೆದಿದೆ.ಬಾಕಿ ಉಳಿದಿರುವ 77 ಎಕರೆ 19 ಗುಂಟೆ ಜಮೀನಿಗೆ 982 ಕೋಟಿ 7 ಲಕ್ಷ 77ಸಾವಿರದ 480 ರೂ.ಮೌಲ್ಯವನ್ನು ನಿಗದಿ ಪಡಿಸಲಾಗಿದೆ.ಸರ್ಕಾರದ ನಿರ್ಧಾರದಂತೆ ಆದಷ್ಟು ಶೀಘ್ರ ಹಣ ಪಾವತಿಸಲು ಸೂಚಿಸಲಾಗುವುದು. ಒಂದು ವೇಳೆ ಹಣ ಪಾವತಿಸದಿದ್ದರೆ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ಭರವಸೆ ನೀಡಿದರು.

ಈ ಸಂಬಂಧದ ವಿಚಾರ ಹೈಕೋರ್ಟ್‍ನಲ್ಲಿ ವಿಚಾರಣೆ ಬಾಕಿ ಇದ್ದು, ಸರ್ಕಾರದಿಂದ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸುಪ್ರೀಂಕೋರ್ಟ್‍ನ ಆದೇಶದ ಪ್ರಕಾರ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಆ ಸಮಿತಿ ಒತ್ತುವರಿ ಭೂಮಿಗೆ ಪಾವತಿಸಬೇಕಾದ ಮೌಲ್ಯವನ್ನು ನಿಗದಿ ಪಡಿಸಿತ್ತು ಎಂದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ರಾಮಸ್ವಾಮಿ, ಸುಪ್ರೀಂಕೋರ್ಟ್‍ನ ಅಂತಿಮ ಆದೇಶವಾಗಿ ಐದು ವರ್ಷ ಕಳೆದರೂ ಒತ್ತುವರಿಯಾದ ಜಮೀನನ್ನು ಏಕೆ ವಶಕ್ಕೆ ಪಡೆದಿಲ್ಲ. ಇದಕ್ಕಿರುವ ಅಡ್ಡಿ ಆತಂಕವಾದರೂ ಏನು, ವಿಳಂಬದ ಹಿಂದೆ ಯಾವ ಶಕ್ತಿ ಇದೆ. ರೈತರು, ಬಡವರ ವಿಚಾರವಾಗಿದ್ದರೆ ಸರ್ಕಾರ ಕೈ ಕಟ್ಟಿ ಕುಳಿತುಕೊಳ್ಳುತ್ತಿತ್ತೆ ಎಂದು ತರಾಟೆಗೆ ತೆಗೆದುಕೊಂಡರು.

ಇದನ್ನು ಬೆಂಬಲಿಸಿ ಮಾತನಾಡಿದ ಬಿಜೆಪಿ ಶಾಸಕರಾದ ಅರಗಜ್ಞಾನೇಂದ್ರ, ಸಿ.ಟಿ.ರವಿ, ಬಸವರಾಜಬೊಮ್ಮಾಯಿ, ಕೆ.ಜಿ.ಬೋಪಯ್ಯ, ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‍ಕುಮಾರ್, ಧೂಳು ನಮ್ಮ ಮುಖದ ಮೇಲಿದೆ. ನಾವು ಕನ್ನಡಿಯನ್ನು ಒರೆಸುತ್ತಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ