ನವದೆಹಲಿ: 1984ರ ಸಿಖ್ ವಿರೋಧಿ ದಂಗೆಯ ಆರೋಪಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ಗೆ ಜೀವಾವಧಿ ಶಿಕ್ಷೆ ವಿಧಿಸಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ ಅದೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್ ಮುರಳೀಧರ್ ಹಾಗೂ ವಿನೋದ್ ಗೊಯೆಲ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.
ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಬಳಿಕ 1984 ನ.1ರಂದು ದಿಲ್ಲಿಯ ಕಂಟೋನ್ಮೆಂಟ್ ಬಳಿ ರಾಜ್ ನಗರದಲ್ಲಿ ಒಂದೇ ಕುಟುಂಬದ ಐವರ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಅವರನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಪ್ರಕರಣ ಸಂಬಂಧ ಮಾಜಿ ಕಾಂಗ್ರೆಸ್ ಕೌನ್ಸಿಲರ್ ಬಲ್ವನ್ ಖೊಕಾರ್, ನಿವೃತ್ತ ನೌಕದಳ ಸಿಬ್ಬಂದಿ ಭಾಗ್ಮಲ್, ಗಿರ್ಧಾಇರಿ ಲಾಲ್ ಹಾಗೂ ಮತ್ತಿಬ್ಬರನ್ನು ದೋಷಿಗಳೆಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿತ್ತು. ಹಾಗೂ ಸಜ್ಜನ್ ಕುಮಾರ್ಗೆ ನ್ಯಾಯಾಲಯ ಖುಲಾಸೆಗೊಳಿಸಿತ್ತು.
ಖೊಕಾರ್, ಭಾಗ್ಮಲ್ ಮತ್ತು ಲಾಲ್ಗೆ ಜೀವಾವಧಿ ಶಿಕ್ಷೆ ವಿಧಿಸಿದರೆ, ಮಾಜಿ ಶಾಸಕ ಮಹೇಂದ್ರ ಯಾದವ್ ಮತ್ತು ಕಿಶನ್ ಕೊಕಾರ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪು ಪ್ರಶ್ನಿಸಿ ಮೇ 2013ರಂದು ದೋಷಿಗಳು ಮೇಲ್ಮನವಿ ಸಲ್ಲಿಸಿದ್ದರು. ಸಿಬಿಐ ಕೂಡ ಈ ‘ಕೋಮುಗಲಭೆ ಪೂರ್ವಯೋಚಿತ’ ಎಂದು ಸಜ್ಜನ್ ಕುಮಾರ್ ಖುಲಾಸೆ ಕ್ರಮವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತ್ತು.