ಮೈಸೂರು: ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ಸೇವಿಸಿ, ಗಂಭೀರವಾಗಿ ಅಸ್ವಸ್ಥರಾಗಿದ್ದ ಇಬ್ಬರು ಇಂದು ಬೆಳಗ್ಗೆ ಮೈಸೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದರೊಂದಿಗೆ ಪ್ರಸಾದ ತಿಂದು ಅಸುನೀಗಿದವರ ಸಂಖ್ಯೆ 13ಕ್ಕೇರಿದೆ.
ಎಂ.ಜಿ.ದೊಡ್ಡಿ ನಿವಾಸಿ ಮಗೇಶ್ವರಿ (35) ಹಾಗೂ ಸಾಲಮ್ಮ ಎಂಬುವವರು ಇಂದು ಬೆಳಗ್ಗೆ ಅಪೋಲೋ ಆಸ್ಪತ್ರೆಯಲ್ಲಿ ಅಸುನೀಗಿದ ದುರ್ದೈವಿಗಳು.
ಪ್ರಸಾದ ಸೇವಿಸಿದ 90 ಮಂದಿ ಅಸ್ವಸ್ಥರಾಗಿದ್ದು, 28 ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಮಕ್ಕಳು ಸೇರಿದಂತೆ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಮಡುಗಟ್ಟಿದೆ.
ಮೈಸೂರಿನ ಕೆ.ಆರ್.ಆಸ್ಪತ್ರೆ, ಜೆಎಸ್ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಗೋಪಾಲಗೌಡ ಸ್ಮಾರಕ ಆಸ್ಪತ್ರೆ, ನಾರಾಯಣ ಹೃದಯಾಲಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಅಪೋಲೋ, ಬೃಂದಾವನ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಯಲ್ಲಿ ಕೊರತೆಯಾಗದಂತೆ ಸರ್ಕಾರದಿಂದ ವ್ಯವಸ್ಥೆ ಮಾಡಲಾಗಿದ್ದು, ಅಸ್ವಸ್ಥರ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕುವ ಸಲುವಾಗಿ ನೋಡಲ್ ಅಧಿಕಾರಿ ನೇಮಿಸಲಾಗಿದೆ.
ಅಸ್ವಸ್ಥಗೊಂಡವ ಆರೋಗ್ಯದಲ್ಲಿ ಚೇತರಿಕೆ ಕಂಡವರನ್ನು ಇಂದು ಮಧ್ಯಾಹ್ನದ ನಂತರ ಡಿಸ್ಜಾರ್ಜ್ ಮಾಡುವ ಸಾಧ್ಯತೆ ಇದೆ