ಬೆಂಗಳೂರು, ಡಿ.16- ಅಪರಾಧ ತಡೆ ಹಾಗೂ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಹಾಗೂ ವಿದ್ಯಾರ್ಥಿಗಳಿಂದ ನಗರದಲ್ಲಿ ಮ್ಯಾರಥಾನ್ ಆಯೋಜಿಸಲಾಗಿತ್ತು.
ಅಪರಾಧ ತಡೆ ಮಾಸಾಚರಣೆ 2018 ಪ್ರಯುಕ್ತ ಉತ್ತರ ವಿಭಾಗದ ಪೊಲೀಸ್ ಹಾಗೂ ಸಪ್ತಗಿರಿ ಮೆಡಿಕಲ್ ಕಾಲೇಜ್ ವತಿಯಿಂದ ಮ್ಯಾರಥಾನ್ ಓಟ ಆಯೋಜಿಸಲಾಗಿದ್ದು, ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಕೆ.ಸಿಂಗ್ ಚಾಲನೆ ನೀಡಿದರು.
ಸಪ್ತಗಿರಿ ಆಸ್ಪತ್ರೆಯ ನೂರಾರು ಮೆಡಿಕಲ್ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಂದ ಬೃಹತ್ ಮ್ಯಾರಥಾನ್ ಓಟಕ್ಕೆ ಬೆಂಗಳೂರು ಪೊಲೀಸ್ಕಮಿಷನರ್ ಟಿ.ಸುನೀಲ್ ಕುಮಾರ್, ಉತ್ತರ ವಿಭಾಗದ ಚೇತನ್ ಸಿಂಗ್ ರಾಥೋಡ್ ಸೇರಿದಂತೆ ಚಲನಚಿತ್ರ ನಟ-ನಟಿರು, ನಿರ್ದೇಶಕರ ಸಾಥ್ ನೀಡಿದರು.
ಪೊಲಿಸ್ ಕಮಿಷನರ್ ಟಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಮ್ಯಾರಥಾನ್ ಓಟ ಹಮ್ಮಿಕೊಳ್ಳಲಾಗಿದ್ದು, ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯಿಂದ ಗೊರಗುಂಟೆಪಾಳ್ಯದ ಪ್ರಭಾಕರ್ ಕೋರೆ ಕನ್ವೆನ್ಷನ್ಹಾಲ್ ವರೆಗೆ ಮ್ಯಾರಥಾನ್ ನಡೆಯಿತು.
ಹೊರ ದೇಶ ಹಾಗೂ ಹೊರ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವಸ್ತುಗಳಿಗೆ ಬಲಿಯಾಗುತ್ತಿರೋ ನಿಟ್ಟಿನಲ್ಲಿ ಹಾಗೂ ಅಪರಾಧ ತಡೆಗಾಗಿ ಜಾಗೃತಿ ಓಟ ನಡೆಸಲಾಯಿತು. ಬೆಳ್ಳಂಬೆಳಗ್ಗೆ ಮ್ಯಾರಥಾನ್ ಓಟ ನಡೆದಿದ್ದರಿಂದ ಕೆಲ ಕಾಲ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.