ಬೆಂಗಳೂರು,ಡಿ.16- ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ಸಾಧನ, ಸಲಕರಣೆಗಳು ಹಾಗೂ ಉಪಕರಣಗಳನ್ನು ವಿತರಿಸುವ ಮೂಲಕ ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬಡವರನ್ನು ಸ್ವಾವಲಂಬಿಗಳನ್ನಾಗಿಸಲು ಬಿಬಿಎಂಪಿ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಅತ್ತಿಗುಪ್ಪೆ ವಾರ್ಡ್ ಸದಸ್ಯ ಡಾ.ಎಸ್.ರಾಜು ತಿಳಿಸಿದ್ದಾರೆ.
ವಾರ್ಡ್ ಕಚೇರಿ ಆವರಣದಲ್ಲಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ , ಪ್ಲಂಬಿಂಗ್ ಕಿಟ್, ಎಲೆಕ್ಟ್ರಿಕಲ್ ಕಿಟ್, ಕಾರ್ಪೆಂಟರಿ ಕಿಟ್, ಇಸ್ತ್ರಿ ಪೆಟ್ಟಿಗೆ, ಬೈಸಿಕಲ್ ವಿತರಿಸಿ ಮಾತನಾಡಿದರು.
ನಾಗರೀಕರ ಜೀವನಮಟ್ಟ ಹಾಗೂ ಆರ್ಥಿಕ ಸುಧಾರಣೆಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅಗತ್ಯವಿರುವ ತರಬೇತಿ ಹಾಗೂ ಸಾಧನ ಸಲಕರಣೆಗಳನ್ನು ಉಚಿತವಾಗಿ ವಿತರಿಸುವ ಮೂಲಕ ವಾರ್ಡ್ ವ್ಯಾಪ್ತಿಯಲ್ಲಿ ನಿರುದ್ಯೋಗ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಟೈಲರಿಂಗ್, ಕಂಪ್ಯೂಟರ್ ಹಾಗೂ ಇತರೆ ಸ್ವಯಂ ಉದ್ಯೋಗಕ್ಕೆ ಪೂರಕವಾದ ತರಬೇತಿ ನೀಡಲಾಗುತ್ತಿದೆ ಎಂದರು.
ಫಲಾನುಭವಿಗಳು ಬಿಬಿಎಂಪಿಯ ಸಾಧನಗಳು, ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳದೆ ಸದ್ಭಳಕೆ ಮಾಡಿಕೊಂಡು ಬದುಕನ್ನು ಕಟ್ಟಿಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಾಬಿ ವೆಂಕಟೇಶ್, ಲಕ್ಷ್ಮೀನಾರಾಯಣ, ಪ್ರಸನ್ನ, ಮುನಿ ನರಸಿಂಹಮೂರ್ತಿ ಮತ್ತಿತರರಿದ್ದರು.