ಬೆಂಗಳೂರಿನಲ್ಲಿ ಮತ್ತೊಮ್ಮೆ ಉಲ್ಬಣಗೊಂಡ ಕಸದ ಸಮಸ್ಯೆ

ಬೆಂಗಳೂರು,ಡಿ.14- ಉದ್ಯಾನನಗರಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಕಸದ ಸಮಸ್ಯೆ ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಇನ್ನೊಂದು ತಿಂಗಳಲ್ಲಿ ಬೆಳ್ಳಳ್ಳಿ ಕ್ವಾರಿ ತುಂಬಿಹೋಗಲಿದ್ದು, ಮುಂದೆ ಎಲ್ಲಿ ಕಸ ಸುರಿಯುವುದು ಎಂಬುದೇ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ಹೊಸದಾಗಿ ಮೂರು ಕಸದ ಘಟಕಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈವರೆಗೆ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ. ಇದು ಪಾಲಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ನಗರದಲ್ಲಿ ಪ್ರತಿ ದಿನ 2000 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಇದನ್ನು ನಗರದ ಹೊರ ವಲಯದ ಬೆಳ್ಳಳ್ಳಿ ಕ್ವಾರಿಗೆ ಸುರಿಯಲಾಗುತ್ತಿತ್ತು. ಆದರೆ ಇನ್ನು ಒಂದು ತಿಂಗಳಲ್ಲಿ ಈ ಘಟಕ ಸಂಪೂರ್ಣವಾಗಿ ತುಂಬಿ ಹೋಗಲಿದೆ. ಹೀಗಾಗಿ ಹೊಸದಾಗಿ ಉಲ್ಲಳ್ಳಿ ಕ್ವಾರೆ, ಮಾರೇನಹಳ್ಳಿ ಕ್ವಾರೆ ಹಾಗೂ ಬಾಗಲೂರು ಕ್ವಾರೆಗಳ ತಪಾಸಣೆ ನಡೆಸಿದ್ದು, ಕಸ ಹಾಕಲು ಅನುಮತಿ ನೀಡುವಂತೆ ಸರ್ಕಾರದ ಮುಂದೆ ಪಾಲಿಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಅನುಮತಿ ನೀಡಿದ್ದೇ ಆದಲ್ಲಿ ಮುಂದಿನ ಮುರು ವರ್ಷಗಳ ಕಾಲ ಕಸ ಸಮಸ್ಯೆಗೆ ಮುಕ್ತಿ ದೊರೆಯಲಿದೆ. ಇಲ್ಲವಾದರೆ ಉದ್ಯಾನನಗರಿ ಕಸದ ನಗರಿಯಾಗುವ ಸಾಧ್ಯತೆಗಳೇ ಹೆಚ್ಚಿವೆ.

ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ಇಂದು ನಿನ್ನೆಯದಲ್ಲ. ಆಗಾಗ ಕಸ ಸಮಸ್ಯೆ ಮಾರ್ದನಿಸುತ್ತಲೇ ಇರುತ್ತದೆ.ಇದಕ್ಕೊಂದು ಶಾಶ್ವತ ಪರಿಹಾರ ಹುಡುಕುವಲ್ಲಿ ಸರ್ಕಾರ ವಿಫಲವಾಗಿದೆ.

ಪರಿಸ್ಥಿತಿ ವಿಷಮಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಪಾಲಿಕೆ ಪ್ರಸ್ತಾವನೆಗೆ ಅನುಮತಿ ನೀಡಿದರೆ ಸದ್ಯದ ಮಟ್ಟಿಗೆ ಸಮಸ್ಯೆ ಬಗೆಹರಿಯುತ್ತದೆ.ಇಲ್ಲವಾದರೆ ಮತ್ತದೇ ಕಸ ಸಮಸ್ಯೆ ನಾಗರೀಕರನ್ನು ಕಾಡುವುದಲ್ಲದೇ ಪಾಲಿಕೆಯನ್ನೂ ಪೇಚಿಗೆ ಸಿಲುಕಿಸುವಲ್ಲಿ ಅನುಮಾನವಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ