ಭಕ್ತಿ ಭಾವ ಮೂಡಬೇಕಾಗಿದ್ದ ಜಾಗದಲ್ಲಿ ವೈಷಮ್ಯದ ಬೆಂಕಿಗೆ ಅಮಾಯಕ ಜೀವಗಳ ಬಲಿ

ಬೆಂಗಳೂರು,ಡಿ.14- ಸುಳ್ವಾಡಿ ಗ್ರಾಮ ಹಾಗೂ ಸುತ್ತಮುತ್ತಲ ಹತ್ತು ಹಳ್ಳಿಯ ಜನ ಮತ್ತು ಗಡಿ ಗ್ರಾಮಗಳನ್ನು ಕಾಯುತ್ತಿದ್ದ ಕಿಚ್ಚುಗತ್ತಿ ಮಾರಮ್ಮ ಮುನಿದಳಾ..? ಭಕ್ತಿ ಭಾವ ಮೂಡಬೇಕಾಗಿದ್ದ ಜಾಗದಲ್ಲಿ ವೈಷಮ್ಯದ ಬೆಂಕಿಗೆ ಅಮಾಯಕ ಜೀವಗಳು ಬಲಿಯಾಗಿ ಹೋದವಾ..

ಮಾರಮ್ಮನ ಗುಡಿಗೆ ಕೈ ಮುಗಿಯುತ್ತಿದ್ದವರು ಈಗ ದೇಗುದತ್ತ ಮುಖ ಮಾಡಲು ಬೆಚ್ಚಿ ಬೀಳುತ್ತಿದ್ದಾರೆ. ದೇವಿಯ ಪ್ರಸಾದವೇ ವಿಷವಾಗಿ ಯಮನ ರೂಪದಲ್ಲಿ 11 ಜನರನ್ನು ಬಲಿ ತೆಗೆದುಕೊಂಡಿದೆ. ಇದಲ್ಲದೇ ಮೂಕ ಪ್ರಾಣಿಗಳಾದ ನಾಯಿಗಳು, 60 ಕಾಗೆಗಳೂ ಆಹುತಿಯಾಗಿವೆ.

ಪ್ರಸಾದ ಸೇವಿಸಿದ ನಂತರವೇ ಅದರ ಪರಿಣಾಮ ಬೀರಿದ್ದಕ್ಕೆ ತಕ್ಷಣವೇ ಎಚ್ಚೆತ್ತುಕೊಂಡು ಆಸ್ಪತ್ರೆ ಸೇರಿದ್ದಕ್ಕೆ ಸಾವಿನ ಪ್ರಮಾಣ ಕಡಿಮೆಯಾಗಿದೆ.ಇಲ್ಲದಿದ್ದರೆ ಇನ್ನೂ ಹತ್ತಾರು ಜನ ಬಲಿಯಾಗಬೇಕಿತ್ತು.

ದೇವಿ ಕೋಪಗೊಂಡಳೇ? ಭಕ್ತರ ದ್ವೇಷಾಸೂಯಕ್ಕೆ ಅಮಾಯಕರು ಜೀವ ತೆತ್ತರೆ?ಈ ಯಕ್ಷ ಪ್ರಶ್ನೆ ಇಡೀ ರಾಜ್ಯವನ್ನು ಕಾಡುತ್ತಿದೆ.ಏನೇ ಕಷ್ಟ ಬಂದರೂ ಕಾಪಾಡುವಂತೆ ಜನರು ದೇವರ ಮೊರೆ ಹೋಗುತ್ತಾರೆ.ಆದರೆ ಕಾಪಾಡಬೇಕಾದ ದೇವರೆ ಮುನಿದು ನಿಂತರೆ ಹೇಗೆ?

ಈ ಮಾರಮ್ಮನ ದೇವಿಗೆ ಶತಮಾನದ ಇತಿಹಾಸವಿದೆ. ಶತಮಾನದ ಹಿಂದೆಯೇ ಇಲ್ಲಿ ನೆಲೆ ನಿಂತು ಭಕ್ತರನ್ನು ಕಾಪಾಡುತ್ತಿದ್ದಳು.ದೇವಿಯ ವಿಷಯದಲ್ಲಿ ಆಡಳಿತ ಮಂಡಳಿಯವರು ಜಗಳವಾಡಿದ್ದೇ ಕಂಟಕವಾಗಿದೆ.

ದೇವರ ಪ್ರಸಾದವನ್ನು ಜನರು ಭಕ್ತಿಯಿಂದ ಸೇವಿಸುತ್ತಿದ್ದರು. ಏನೇ ತೊಂದರೆಯಾದರೂ ಬಂದು ಕಾಪಾಡುವಂತೆ ಮೊರೆಯಿಡುತ್ತಿದ್ದರು. ಎಲ್ಲರನ್ನೂ ಸಲಹುತ್ತಿದ್ದ ಮಾರಮ್ಮನ ಸನ್ನಿಧಿಯಲ್ಲಿ ದುರುಳರ ಅಟ್ಟಹಾಸದ ಕೈ ಮೇಲಾಗಿದೆ.

ಸಾವು ಬದುಕಿನ ನಡುವೆ ಭಕ್ತರ ನರಳಾಟ ಸುಳ್ವಾಡಿ ಗ್ರಾಮದಲ್ಲಿ ಸೂತಕದ ಛಾಯೆ, ಮೈಸೂರು, ಕೊಳ್ಳೆಗಾಲದ ವಿವಿಧ ಆಸ್ಪತ್ರೆಗಳಲ್ಲಿ ಆತಂಕದ ವಾತಾವರಣ, ತಮ್ಮವರನ್ನು ಬದುಕಿಸಿಕೊಳ್ಳಲು ಹೆಣಗಾಡುತ್ತಿರುವ ಕುಟುಂಬಸ್ಥರು, ಅಸ್ವಸ್ಥರಾಗಿರುವವರನ್ನು ಬದುಕಿಸಲು ಹರಸಾಹಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಸುಳ್ವಾಡಿ ಸಮೀಪ ಬಿದರಳ್ಳಿಯ ಒಂದೇ ಗ್ರಾಮದ 7 ಜನ ಮೃತಪಟ್ಟಿರುವ ಆಘಾತಕಾರಿ ಸುದ್ದಿ ಗ್ರಾಮದ ಜನ ದಿಕ್ಕೆಟ್ಟಿದ್ದಾರೆ. ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಇತ್ತೀಚೆಗಷ್ಟೇ ಮಂಡ್ಯದ ಕನಗನಹಳ್ಳಿ ವಿಸಿ ನಾಲೆಗೆ ಬಸ್ ಉರುಳಿ ಶಾಲಾ ಮಕ್ಕಳು ಸೇರಿದಂತೆ 30 ಜನ ಮೃತಪಟ್ಟ ಘಟನೆ ಮಾಸುವ ಮುನ್ನವೇ ಪ್ರಸಾದ ಸೇವಿಸಿ 11 ಜನ ಸಾವನ್ನಪ್ಪಿರುವ ಘಟನೆ ನಡೆದಿರುವುದು ಜನ ಹಾಗೂ ಜನಪ್ರತಿನಿಧಿಗಳನ್ನು ದಿಗ್ಬ್ರಾಂತಿಗೊಳಿಸಿದೆ.

ನಿನ್ನೆ ಪ್ರಸಾದ ಸೇವಿಸಿ ಸಾವಿನ ದುರಂತ ಪ್ರಕರಣ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ದೇವಸ್ಥಾನ, ಆಸ್ಪತ್ರೆ, ಗ್ರಾಮಕ್ಕೆ ಜನ ಜಾತ್ರೆಯೇ ಸೇರಿದೆ.ತಮಗೆ ತೋಚಿದಂತೆ ಘಟನೆ ವ್ಯಾಖ್ಯಾನಿಸುತ್ತಿದ್ದಾರೆ. ಜೊತೆಗೆ ಆಸ್ಪತ್ರೆಗೆ ಸೇರಿಸಲು, ಅವರ ಚಿಕಿತ್ಸೆಗೆ ನೆರವಾಗಲು, ಆಸ್ಪತ್ರೆಯಲ್ಲಿರುವವರನ್ನು ಹೇಗಾದರು ಮಾಡಿ ಉಳಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ.

ಹೆಣ್ಣು ಮಕ್ಕಳಿಬ್ಬರನ್ನು ಕೂಲಿ ಮಾಡಿ ಓದಿಸುತ್ತಿದ್ದ ತಂದೆ ತಾಯಿ ತಾವು ಪ್ರಸಾದ ತಿಂದು ತಮ್ಮ ಮಕ್ಕಳಿಗೂ ತಂದು ಕೊಟ್ಟರು. ಇದನ್ನು ತಿಂದ ಹೆಣ್ಣು ಮಕ್ಕಳಿಬ್ಬರು ಏಕೋ ಕಹಿಯಾಗಿದೆ ಎಂದು ಬಿಟ್ಟರು. ಅರ್ಧ ಗಂಟೆಯಲ್ಲಿ ಪ್ರಸಾದ ತಿಂದಿದ್ದ ಅವರ ತಂದೆ ತಾಯಿ ಇಬ್ಬರೂ ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ಕರೆತರುವಲ್ಲಿ ಬಹಳ ಶ್ರಮಪಟ್ಟರಾದರೂ ಉಳಿಸಿಕೊಳ್ಳಲಾಗಲಿಲ್ಲ. ಈ ಮಕ್ಕಳಿಬ್ಬರ ಗೋಳು ಹೇಳತೀರದಾಗಿದೆ.

ಇಂತಹ ಕರುಣಾಜನಕ ಕಥೆಗಳು ನಾನಾ ಆಸ್ಪತ್ರೆಗಳಲ್ಲಿ ಕಂಡು ಬಂದವು.ಅಸ್ವಸ್ಥರ ಜೊತೆ ಸಂಬಂಧಿಕರು ಮಾತನಾಡಲು ಅವಕಾಶ ನೀಡುತ್ತಿಲ್ಲ ಪೆÇಲೀಸ್ ಸಿಬ್ಬಂದಿ ಜೊತೆ ಮಾತಿನ ಚಕಮಕಿಯೂ ಕೂಡ ನಡೆಯಿತು.ನರಳಾಟ, ಗೋಳಾಟ, ಮೃತರ ದೇಹಗಳನ್ನು ಪಡೆಯಲು ಪಡುತ್ತಿದ್ದ ಪಡಿಪಾಟಲು ಕಂಡು ಎಂತಹವರ ಕರಳು ಚುರ್ ಎನ್ನದೇ ಇರಲಿಲ್ಲ.

ತಂದೆ ತಾಯಿ ಕಳೆದುಕೊಂಡ ಮಕ್ಕಳು, ಮಗುವನ್ನು ಕಳೆದು ಕೊಂಡ ತಾಯಿ, ಸಂಬಂಧಿಕರನ್ನು ಕಳೆದುಕೊಂಡವರ ಅಳಲು.. ಒಟ್ಟಾರೆ ಹೆಪ್ಪುಗಟ್ಟಿದ ಶೋಕ ದುಃಖಕ್ಕೆ ಒಂದು ದೇವಾಲಯದ ಗೋಪುರ ನಿರ್ಮಾಣದ ಪ್ರತಿಷ್ಠೆ ಕಾರಣವಾಗಿದ್ದು ಮಾತ್ರ ದುರಂತ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ