ಬೆಳಗಾವಿ, ಡಿ.14-ಕಳೆದ ಒಂದು ವಾರದಿಂದ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದ ಉಭಯ ಸದನದ ಕಾರ್ಯಕಲಾಪಗಳು ಯಾವುದೇ ರಾಜಕೀಯ ಮೇಲಾಟವಿಲ್ಲದೆ, ಸುಗಮವಾಗಿ ನಡೆದದ್ದು ವಿಶೇಷವಾಗಿತ್ತು.
ಆದರೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ಆರಂಭದಿಂದಲೂ ನಡೆಸುತ್ತಲೇ ಬಂದವು. ಪ್ರತಿದಿನ ಒಂದಲ್ಲ ಒಂದು ಸಂಘಟನೆಗಳು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದವು. ಇದನ್ನು ಹತ್ತಿಕ್ಕಲು ಪ್ರಯತ್ನಿಸಿದ ಸರ್ಕಾರದ ಸಚಿವರು, ಹಿರಿಯ ಅಧಿಕಾರಿಗಳು ಪ್ರತಿಭಟನಾ ನಿರತರನ್ನು ಮನವೊಲಿಸುವ ಯತ್ನ ಮಾಡಿದರು.
ಚಳಿಗಾಲದ ಅಧಿವೇಶನದ ಬಗ್ಗೆ ಹಲವು ರೀತಿಯ ಸಂದೇಹಗಳು ಮೂಡಿದ್ದವು. ಇದರ ನಡುವೆಯೂ ಅಧಿವೇಶನ ಸುಸೂತ್ರವಾಗಿ ನಡೆಯಿತು.
ಕಳೆದ ಸೋಮವಾರ ಅಧಿವೇಶನದ ಆರಂಭದಲ್ಲೇ ಕಬ್ಬು ಬೆಳೆಗಾರರ ಹಾಗೂ ಬಿಜೆಪಿ ಪ್ರತಿಭಟನೆಯ ಕಾವು ಸರ್ಕಾರಕ್ಕೆ ಮುಟ್ಟಿತ್ತು.ಆದರೆ ಪ್ರತಿಭಟನೆ ಕಾವನ್ನು ತಣ್ಣಗಾಗಿಸುವಲ್ಲಿ ಸಮ್ಮಿಶ್ರ ಸರ್ಕಾರ ಸಫಲವಾಯಿತು.
ಪ್ರತಿನಿತ್ಯ ಒಂದಲ್ಲ ಒಂದು ಇಲಾಖಾವಾರು ಸಭೆಗಳು, ಸಚಿವರ ಹಾಗೂ ಸಂಪುಟ ಉಪಸಮಿತಿಯ ಸಭೆಗಳು ಸೇರಿದಂತೆ ಆಯಾ ಇಲಾಖಾವಾರು ಉನ್ನತ ಮಟ್ಟದ ಸಭೆಗಳು ನಡೆದವು.
ಕಲಾಪದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.ಮಂಗಳವಾರ ಪ್ರಶ್ನೋತ್ತರ, ಶೂನ್ಯವೇಳೆ ಅಧಿಕೃತ ಕಾರ್ಯಕಲಾಪಗಳು ಪ್ರಾರಂಭವಾಗಿ ಬರದ ವಿಚಾರದಲ್ಲಿ ವಿಸ್ತೃತ ಚರ್ಚೆಯೂ ನಡೆಯಿತು.
ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಜನರ ಸಮಸ್ಯೆಗಳ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ಸರ್ಕಾರದಿಂದ ಉತ್ತರ ಪಡೆಯುವ ಪ್ರಯತ್ನ ಮಾಡಿದರು.
ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆ ಸೇರಿದಂತೆ ಇನ್ನಿತರ ಪ್ರಮುಖ ಸಮಸ್ಯೆಗಳ ಬಗ್ಗೆ ಹೆಚ್ಚಿನ ರೀತಿಯ ಚರ್ಚೆ ನಡೆಯಲಿಲ್ಲ ಎಂಬ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ಕೇಳಿ ಬಂದಿತು.
ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಸಭೆ ನಡೆದು ಕ್ರಿಯಾಯೋಜನೆ ರೂಪಿಸುವ ತೀರ್ಮಾನವಾದರೆ, ಮಲೆನಾಡು ಪ್ರದೇಶಾಭಿವೃದ್ಧಿಗೆ 150 ಕೋಟಿ ರೂ. ಕ್ರಿಯಾ ಯೋಜನೆ ಹಾಗೂ ಹೈದರಾಬಾದ್ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ರಿಂದ 2000 ಕೋಟಿಗೆ ಅನುದಾನ ಹೆಚ್ಚಿಸುವ ಪ್ರಸ್ತಾಪಕ್ಕೆ ಸಮ್ಮಿತಿ ದೊರೆಯಿತು.
ಹೊಸ ಪಿಂಚಣಿ ಯೋಜನೆ ರದ್ಧತಿಗೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಸಮಿತಿ ರಚಿಸಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸುವ ಭರವಸೆ ದೊರೆಯಿತು. ಇನ್ನು ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ನಿರಂತರ ಪ್ರತಿಭಟನೆ ನಡೆಸಿದರೂ ತಾರ್ಕಿಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಹೊರಗಡೆ ನಿರಂತರ ಪ್ರತಿಭಟನೆ ನಡೆದರೂ ಸುವರ್ಣಸೌಧದ ಒಳಗೆ ಉಭಯ ಸದನಗಳಲ್ಲಿ ಸುಗಮ ಕಾರ್ಯಕಲಾಪಗಳು ನಡೆದಿದ್ದು, ಈ ಬಾರಿಯ ವಿಶೇಷ. ವಿಧಾನಪರಿಷತ್ ಸಭಾಪತಿಯಾಗಿ ಪ್ರತಾಪ್‍ಚಂದ್ರಶೆಟ್ಟಿ ಅವರು ಅವಿರೋಧ ಆಯ್ಕೆಯಾದರು.
ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಹಾಗೂ ಎಸ್.ಆರ್.ಪಾಟೀಲ್ ಅವರ ಹೆಸರು ಕೇಳಿ ಬಂದಿತ್ತಾದರೂ ಪ್ರತಾಪ್‍ಚಂದ್ರ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು. ಇದು ಅಚ್ಚರಿಗೆ ಕಾರಣವಾಯಿತು.
ಶಾಸಕರ ಅತೃಪ್ತಿ, ಆಪರೇಷನ್ ಕಮಲ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯಾದ ನಂತರ ಬಿಜೆಪಿ ಸದನದ ಕಾರ್ಯಕಲಾಪಗಳಿಗೆ ಹೆಚ್ಚು ಒತ್ತು ನೀಡಿತ್ತು.
ಹಾಗಾಗಿ ರಾಜಕೀಯ ತಿರುವುಗಳು ಅಥವಾ ವಿಶೇಷ ಚಟುವಟಿಕೆಗಳು ಅಷ್ಟಾಗಿ ಬಿರುಸು ಪಡೆದುಕೊಳ್ಳಲಿಲ್ಲ. ಮುಂದಿನ ವಾರ ಅಂದರೆ 17 ರಿಂದ ಮುಂದುವರೆಯಲಿರುವ ಕಲಾಪಕ್ಕೂ ಮುನ್ನ ಸಿಎಂ ನೇತೃತ್ವದಲ್ಲಿ ಆಡಳಿತ ಪಕ್ಷದ ಅತೃಪ್ತ ಶಾಸಕರ ಸಭೆಯೂ ನಡೆಯಲಿದೆ.