ನವದೆಹಲಿ: ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ತೀರ್ಪನ್ನುಇಂದು ಸುಪ್ರೀಂಕೋರ್ಟ್ ನೀಡಲಿದೆ.
ಫ್ರಾನ್ಸ್ನೊಂದಿಗಿನ 36 ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದ್ದು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಕೋರಿ ಪ್ರಶಾಂತ್ ಭೂಷಣ್, ಎಂಎಲ್ ಶರ್ಮಾ, ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್ ಶೌರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ನ.14ರಂದು ಇವುಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪನ್ನು ಡಿ.14ಕ್ಕೆ ಕಾಯ್ದಿರಿಸಿತ್ತು.
ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್, ನ್ಯಾ.ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರಿರುವ ನ್ಯಾಯಪೀಠ, ಈ ಹಂತದಲ್ಲಿ ಅರ್ಜಿದಾರರಿಗೆ ಜೆಟ್ ದರದ ಬಗ್ಗೆ ಯಾವುದೇ ಮಾಹಿತಿ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿತ್ತು. ಜೊತೆಗೆ ಡಸಾಲ್ಟ್ ಏವಿಯೆಷನ್ ಮತ್ತು ರಿಲಾಯನ್ಸ್ ಡಿಫೆನ್ಸ್ ನಡುವೆ ನಡೆದಿರುವ ಆಂತರಿಕ ಒಪ್ಪಂದದ ಕುರಿತು ಕೋರ್ಟ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಒಪ್ಪಂದದ ಮೊತ್ತವನ್ನು ಸುಪ್ರೀಂಗೆ ಮುಚ್ಚಿದ ಲಕೋಟೆಯಲ್ಲಿ ಕೇಂದ್ರ ಮಾಹಿತಿ ನೀಡಿತ್ತು.
ಇಂದು ನೀಡುವ ಸುಪ್ರೀಂ ಆದೇಶದ ಕೇಂದ್ರ ಸರ್ಕಾರಕ್ಕೆ ನಿರ್ಣಾಯಕ ಪಾತ್ರ ವಹಿಸಲಿದೆ. ಒಂದೊಮ್ಮೆ ಸುಪ್ರೀಂಕೋರ್ಟ್ ತನಿಖೆಗೆ ಆದೇಶಿಸಿದರೆ ಕೇಂದ್ರ ಸರ್ಕಾರಕ್ಕೆ ಇದು ತೀವ್ರ ಹಿನ್ನಡೆ ಉಂಟಾಗಲಿದೆ. ಅಲ್ಲದೇ ಮೋದಿ ವರ್ಚಸ್ಸಿಗೆ ಇದು ದೊಡ್ಡ ಹೊಡೆತ ನೀಡಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲಿವೆ.
ಭಾರತೀಯ ವಾಯುಸೇನೆ ಬಲಪಡಿಸುವ ಉದ್ದೇಶದಿಂದಾಗಿ ಭಾರತ ಫ್ರಾನ್ಸ್ನೊಂದಿಗೆ 36 ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರ ಒಟ್ಟಾರೆ ಅಂದಾಜು ದರ 58 ಸಾವಿರ ಕೋಟಿ ರೂಪಾಯಿ ಎನ್ನಲಾಗಿದೆ. ರಫೇಲ್ ಯುದ್ಧ ವಿಮಾನ ಎರಡು ಮಧ್ಯಮ ಗಾತ್ರದ ಎಂಜಿನ್ ಹೊಂದಿರುವ ಮಲ್ಟಿರೋಲ್ ವಿಮಾನವಾಗಿದೆ. ಇದನ್ನು ಫ್ರಾನ್ಸ್ನ ವಿಮಾನ ತಯಾರಿಕೆ ಸಂಸ್ಥೆ ಡಸಾಲ್ಟ್ ಕಂಪನಿ ತಯಾರಿಸುತ್ತದೆ.