ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ 2164 ಕಿ.ಮೀ. ರಸ್ತೆ ಹಾಳಾಗಿದೆ

ಬೆಳಗಾವಿ, ಡಿ.14- ರಾಜ್ಯದಲ್ಲಿ ಕಳೆದ ಆಗಸ್ಟ್-ಸೆಪ್ಟಂಬರ್‍ನಲ್ಲಿ ಸುರಿದ ಭಾರೀ ಮಳೆಯಿಂದಾಗಿ 8 ಜಿಲ್ಲೆಗಳಲ್ಲಿ 2164 ಕಿ.ಮೀ ರಸ್ತೆ ಹಾಳಾಗಿದ್ದು, ಸುಮಾರು 1898 ಕೋಟಿ ನಷ್ಟವಾಗಿದೆ ಎಂದು ಸಚಿವ ಎಚ್.ಡಿ.ರೇವಣ್ಣ ವಿಧಾನ ಪರಿಷತ್‍ನಲ್ಲಿ ಇಂದು ತಿಳಿಸಿದರು.

ಪ್ರಕೃತಿ ವಿಕೋಪದಿಂದಾಗಿ ಕರಾವಳಿ, ಮಲೆನಾಡು ಭಾಗದ ಎಂಟು ಜಿಲ್ಲೆಗಳಲ್ಲಿ ಹಾಳಾಗಿರುವ ರಸ್ತೆಗಳನ್ನು ದುರಸ್ತಿಪಡಿಸಲು 1896.13 ಕೋಟಿ ಅನುದಾನದ ಅಗತ್ಯವಿದೆ.ಇದಕ್ಕೆ ಕೇಂದ್ರ ಸರ್ಕಾರದ ನೆರವು ಪಡೆಯಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಬಿಜೆಪಿ ಸದಸ್ಯೆ ಡಾ.ತೇಜಸ್ವಿನಿ ಗೌಡ ಪ್ರಶ್ನೆಗೆ ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ 620.08 ಕಿ.ಮೀ ( 586.30) ಕೋಟಿ ನಷ್ಟ, ದಕ್ಷಿಣ ಕನ್ನಡ 183.187 ಕಿ.ಮೀ (66.73 ಕೋಟಿ ನಷ್ಟ), ಉಡುಪಿ 137.99(197.99 ಕೋಟಿ), ಹಾಸನ-329.98 ಕಿ.ಮೀ ರಸ್ತೆ (261.81 ಕೋಟಿ), ಚಿಕ್ಕಮಗಳೂರು-155.05 ಕಿ.ಮೀ (61.13 ಕೋಟಿ )ಶಿವಮೊಗ್ಗ-64.85 ಕಿ.ಮೀ (30.27 ಕೋಟಿ) ನಷ್ಟ, ಉ.ಕನ್ನಡ 135.90 ಕಿ.ಮೀ(15.51 ಕೋಟಿ), ರಾಷ್ಟ್ರೀಯ ಹೆದ್ದಾರಿಗಳು 537.52 ಕಿ.ಮೀ(781.27 ಕೋಟಿ) ಸೇರಿದಂತೆ ಒಟ್ಟು ಭಾರೀ ಮಳೆಯಿಂದಾಗಿ 2164.54 ಕಿಮೀ ನಷ್ಟವಾಗಿದ್ದು, ಅಂದಾಜು 1896.13 ಕೋಟಿ ನಷ್ಟವಾಗಿದೆ ಎಂದು ವಿವರಿಸಿದರು.

ಶಿರಾಡಿಘಾಟ್ ರಸ್ತೆ ನಿರ್ಮಾಣ ಮಾಡುವ ಸಂಬಂಧ ಕೇಂದ್ರ ಸಾರಿಗೆ ಸಚಿವ ನಿತಿನ್‍ಗಡ್ಕರಿ ಜೊತೆ ಸಿಎಂ ಕುಮಾರಸ್ವಾಮಿ ಅವರು ಮೂರು ಬಾರಿ ಮಾತುಕತೆ ನಡೆಸಿದ್ದಾರೆ. ಸುಮಾರು 21 ಕಿ.ಮೀ ಟೆನಲ್ ರಸ್ತೆ ನಿರ್ಮಾಣವಾಗುತ್ತಿದ್ದು, ಅಂದಾಜು 10 ಸಾವಿರ ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ಈ ರಸ್ತೆ ಕಾಮಗಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ವಹಣೆ ಮಾಡಲಿದ್ದು, ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಅನುದಾನ ನೀಡಲಿದೆ ಎಂದು ರೇವಣ್ಣ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ