ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ ವೆಲ್ : ಸಚಿವ ಪ್ರಿಯಾಂಕ್ ಖರ್ಗೆ

ಬೆಳಗಾವಿ(ಸುವರ್ಣಸೌಧ), ಡಿ.14- ಭೂ ಒಡೆತನ ಯೋಜನೆಯಡಿ ಭೂಮಿ ಪಡೆದ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಈ ವರ್ಷದಿಂದ ಉಚಿತವಾಗಿ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆಸಿಕೊಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ಡಾ.ಕೆ.ಅನ್ನದಾನಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಭೂಮಿ ಖರೀದಿಗೆ ಮಾರ್ಗಸೂಚಿ ಬೆಲೆಗಿಂತಲೂ ಮೂರು ಪಟ್ಟು ದರವನ್ನು ಸರ್ಕಾರ ಹೆಚ್ಚಿಸಿದೆ. ಅದನ್ನು ಮೀರಿ ಹಣ ಬೇಕಿದ್ದರೆ ಜಿಲ್ಲಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ 2014-15ರಲ್ಲಿ 35 ಫಲಾನುಭವಿಗಳಿಗೆ 5696 ಎಕರೆ, 2015-16ರಲ್ಲಿ 1117 ಫಲಾನುಭವಿಗಳಿಗೆ 1578 ಎಕರೆ, 2016-17ರಲ್ಲಿ 1040 ಫಲಾನುಭವಿಗಳಿಗೆ 1332 ಎಕರೆ , 2017-18ರಲ್ಲಿ 2086 ಮಂದಿಗೆ 2611 ಎಕರೆ, 2018-19ರಲ್ಲಿ 176 ಫಲಾನುಭವಿಗಳಿಗೆ 174 ಎಕರೆ ಭೂಮಿಯನ್ನು ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಖರೀದಿಸಿ ಕೊಡಲಾಗಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದಿಂದಲೂ ಇದೇ ರೀತಿ ಫಲಾನುಭವಿಗಳನ್ನು ಆಯ್ಕೆ ಮಾಡಿ ನೂರಾರು ಎಕರೆ ಭೂಮಿಯನ್ನು ಹಂಚಿಕೆ ಮಾಡಿರುವುದಾಗಿ ಹೇಳಿದರು.

ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಭಾಗವಹಿಸಿದ ಬಿಜೆಪಿ ಶಾಸಕ ಪಿ.ರಾಜೀವ್ ಅವರು, ಆಯಾ ತಾಲ್ಲೂಕಿನಲ್ಲೇ ಭೂಮಿ ಖರೀದಿಸಬೇಕೆಂಬ ಷರತ್ತಿದೆ.ಅದನ್ನು ಸಡಿಲ ಮಾಡಿ ಪಕ್ಕದ ತಾಲ್ಲೂಕಿನಲ್ಲೂ ಖರೀದಿಸಲು ಅವಕಾಶ ನೀಡಬೇಕು ಎಂದರು.

ಆ ರೀತಿ ನಿಯಮ ಬದಲಾಯಿಸಲು ಇದು ರಿಯಲ್‍ಎಸ್ಟೇಟ್ ವ್ಯವಹಾರವಲ್ಲ ಎಂದು ಸ್ಪೀಕರ್ ರಮೇಶ್‍ಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು.
ಅಮರೇಗೌಡ ಬಯ್ಯಾಪುರ ಸೇರಿದಂತೆ ಇತರೆ ಶಾಸಕರು ಭೂಮಿಯ ಬೆಲೆ ಹೆಚ್ಚು ಮಾಡಬೇಕು, ಕಾಲಮಿತಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.

ಶಾಸಕ ಅನ್ನದಾನಿ ಅವರು, ಭೂ ಒಡೆತನ ಯೋಜನೆಯಡಿ ಭೂಮಿ ಪಡೆದ ನಂತರ ಅವರಿಗೆ ಭೂಮಿ ಸಮತಟ್ಟು ಮಾಡಿಕೊಡಲು, ಬೋರ್‍ವೆಲ್ ಕೊರೆಸಲು ಸರ್ಕಾರ ನೆರವು ನೀಡಬೇಕು, ದಲಿತರಿಗೆ ಯಾವ ಬ್ಯಾಂಕುಗಳು ಸಾಲ ಕೊಡಲು ಮುಂದೆ ಬರುವುದಿಲ್ಲ. ಸರ್ಕಾರವೇ ಅವರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಭೂಮಿ ಒಡೆತನ ಸಿಕ್ಕ ಮೇಲೆ ಉಳಿದಿದ್ದನ್ನು ಫಲಾನುಭವಿಗಳು ಮಾಡಿಕೊಳ್ಳಬೇಕು.ಪರಿಶಿಷ್ಟ ಸಮುದಾಯಕ್ಕೆ ಶೇ.90ರವರೆಗೂ ಸಬ್ಸಿಡಿ ನೀಡುವ ಯೋಜನೆಗಳಿವೆ. ಸರ್ಕಾರಿ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳಿಗೆ ಮಾಹಿತಿ ಇರಬೇಕೆಂದು ಹೇಳಿದರು.

ಈ ವರ್ಷದಿಂದ ಗಂಗಾಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆಸಿಕೊಡುತ್ತಿರುವ ವಿಷಯವನ್ನು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ