ರಫೇಲ್ ಹಗರಣ ಸುಪ್ರೀಂಕೋರ್ಟ್ ತೀರ್ಪಿನಿಂದ ಕಾಂಗ್ರೇಸ್ಸಿಗೆ ಮುಖಭಂಗ, ಮಾಜಿ ಸಿ.ಎಂ.ಯಡಿಯೂರಪ್ಪ

ಬೆಳಗಾವಿ,ಡಿ.14- ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಪ್ರಕರಣದ ವಿಚಾರದಲ್ಲಿ ಕಾಂಗ್ರೆಸ್‍ಗೆ ಮುಖಭಂಗವಾಗಿದೆ ಎಂದು ವಿರೋಧ ಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ರಫೇಲ್ ವಿಚಾರವನ್ನು ದೊಡ್ಡದು ಮಾಡಿ ಕೇಂದ್ರದ ವಿರುದ್ಧ ಆರೋಪ ಮಾಡುತ್ತಾ ಬಂದಿತ್ತು. ಈಗ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದು, ಕೋರ್ಟ್ ನೀಡಿರುವ ತೀರ್ಪಿನಿಂದ ಕಾಂಗ್ರೆಸ್‍ಗೆ ಮುಖಭಂಗವಾಗಿದ್ದರೆ, ಭಾರತೀಯ ಜನತಾಪಾರ್ಟಿಗೆ (ಬಿಜೆಪಿ) ಇದರಿಂದ ನೈತಿಕವಾಗಿ ದೊಡ್ಡ ಶಕ್ತಿ ತುಂಬಿದಂತಾಗಿದೆ ಎಂದರು.

ಆರೇಳು ತಿಂಗಳಿನಿಂದ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದವು.ಪ್ರಧಾನಿ ನರೇಂದ್ರ ಮೋದಿ ಅವರು ಕಾನೂನಿನ ವಿರುದ್ಧವಾಗಿ ಕೆಲಸ ಮಾಡಿಲ್ಲ ಎಂಬುದು ಇದರಿಂದ ಗೊತ್ತಾಗಿದೆ.ಸುಪ್ರೀಂಕೋರ್ಟ್ ತೀರ್ಪಿನಿಂದ ಅವರು ಸಾಬೀತಾಗಿದೆ ಎಂದರು.

ಸಂಜೆ ಶ್ರೀಗಳ ಭೇಟಿ:
ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಮಠದ ಮಠಾಧೀಶರಾದ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿ ಅವರನ್ನು ಯಡಿಯೂರಪ್ಪ ಭೇಟಿ ಮಾಡಲಿದ್ದಾರೆ.

ಈಗಾಗಲೇ ಶ್ರೀಗಳೊಂದಿಗೆ ಮಾತನಾಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಮಠಕ್ಕೆ ಶಿವಕುಮಾರ್ ಸ್ವಾಮೀಜಿಗಳು ಮರಳಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ