ಬೆಳಗಾವಿ(ಸುವರ್ಣಸೌಧ), ಡಿ.14- ರಾಜ್ಯದ ಗಡಿ ಭಾಗವಾಗಿರುವ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಪ್ರವಾಸಿ ತಾಣ ಅಭಿವೃದ್ಧಿಗೆ ಈಗಾಗಲೇ ಒಂದು ಕೋಟಿ ಅನುದಾನ ನೀಡಲಾಗಿದೆ. ಮುಂದೆ ಅಗತ್ಯ ಕಂಡು ಬಂದರೆ ಸರ್ಕಾರ ಅನುದಾನ ನೀಡಲು ಸಿದ್ದವಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಭರವಸೆ ನೀಡಿದರು.
ವಿಧಾನಸಭೆಯ ಪ್ರಶ್ನೋತ್ತ ಅವಧಿಯಲ್ಲಿ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಬದಲಾಗಿ ಶಾಸಕ ಪಿ.ರಾಜೀವ್ ಪ್ರಶ್ನೆ ಕೇಳಿ, ನಿಪ್ಪಾಣಿ ರಾಜ್ಯದ ಗಡಿ ಭಾಗದಲ್ಲಿರುವ ತಾಲ್ಲೂಕು. ಇತ್ತೀಚೆಗೆ ಅಲ್ಲಿನ ಕನ್ನಡಿಗರು ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ನಾವು ಕರ್ನಾಟಕದ ಕಿರೀಟ ಎಂದು ಘೋಷಣೆ ಮಾಡಿಕೊಂಡಿದ್ದಾರೆ.ಅಲ್ಲಿ ಪಶ್ಚಿಮಘಟ್ಟ ಅರಣ್ಯ ಪ್ರದೇಶವಿದೆ. ಹಲವಾರು ಪ್ರಖ್ಯಾತ ದೇವಸ್ಥಾನಗಳಿವೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಅವಕಾಶವಿದೆ. ಸರ್ಕಾರ ಅನುದಾನ ನೀಡಬೇಕು ಎಂದರು.
ಅದಕ್ಕೆ ಉತ್ತರಿಸಿದ ಸಚಿವ ಸಾ.ರಾ.ಮಹೇಶ್ ಅವರು, ರಾಜ್ಯದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ನಿಪ್ಪಾಣಿ ಇಲ್ಲ. ಆದರೂ ಇತ್ತೀಚೆಗೆ ಸರ್ಕಾರ ಒಂದು ಕೋಟಿ ರೂ. ಅನುದಾನ ನೀಡಿದೆ.ಅಗತ್ಯ ಕಂಡು ಬಂದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹಣಕಾಸು ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.