ಉತ್ತರ ಕರ್ನಾಟಕ ಅಭಿವೃದ್ಧಿ ಮತ್ತು ಸಮಸ್ಯೆ ಕುರಿತು ಚರ್ಚೆಗೆ ಅವಕಾಶ, ಇಬ್ಬರು ಶಾಸಕರಿಂದ ಮೌನ ಪ್ರತಿಭಟನೆ

ಬೆಳಗಾವಿ,ಡಿ.14- ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ದಿ ಹಾಗೂ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂಬ ಬೇಡಿಕೆಯನ್ನಿಟ್ಟು ಇಬ್ಬರು ಶಾಸಕರು ಸುವರ್ಣಸೌಧದ ಮೆಟ್ಟಿಲು ಮೇಲೆ ಕುಳಿತು ಮೌನ ಪ್ರತಿಭಟನೆ ನಡೆಸಿದರು.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಹಾಗೂ ದಕ್ಷಿಣ ಕ್ಷೇತ್ರ ಶಾಸಕ ಅಭಯ್ ಪಾಟೀಲ್ ಧರಣಿ ನಡೆಸಿದ ಶಾಸಕರು.
ತಮ್ಮ ಕ್ಷೇತ್ರದ ಸಮಸ್ಯೆ ನಿವಾರಣೆ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಾಲಾವಕಾಶ ಕೊರತೆ ಇದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಯಾವ ಪುರುಷಾರ್ಥಕ್ಕಾಗಿ ಈ ಅಧಿವೇಶನ ನಡೆಸುತ್ತಿದ್ದೀರಿ ಎಂದು ಅವರು ಫಲಕದಲ್ಲಿ ಬರೆದುಕೊಂಡು ಪ್ರತಿಭಟನೆ ನಡೆಸಿದರು.

ಹಿರಿಯ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇನ್ನಿತರ ಹಿರಿಯ ನಾಯಕರು ಇವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಮದುರ್ಗದ ಶಾಸಕ ಮಹದೇವಪ್ಪ ಯಾದವಾಡ್ ಅವರು ಸಹ ಶಾಸಕರ ಮೌನ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ ಧರಣಿನಿರತರನ್ನು ಸಮಾಧಾನಪಡಿಸಿ ಸದನಕ್ಕೆ ಹಾಜರಾಗುವಂತೆ ಮನವೊಲಿಸಿಕರೆದೊಯ್ದರು.

ನಂತರ ಮಾತನಾಡಿದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಅಧಿವೇಶನದಲ್ಲಿ ಖಾಸಗಿ ನಿರ್ಣಯ ಮಂಡಿಸಲು ಅವಕಾಶ ನೀಡದ ಕಾರಣ ನಮ್ಮ ಮೂವರು ಶಾಸಕರು ಧರಣಿ ನಡೆಸಿದ್ದರು.ಈ ಬಗ್ಗೆ ಸ್ಪೀಕರ್ ಮನವೊಲಿಸಿ ಚರ್ಚೆಗೆ ಅನುಮತಿ ಪಡೆದಿದ್ದೇವೆ. ಸೋಮವಾರದಿಂದ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿವೆ ಎಂದರು.

ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇದೇ ರೀತಿ ತಾರತಮ್ಯ ಮುಂದುವರಿಸಿದರೆ ಸರ್ಕಾರ ಏಕೆ ನಡೆಸಬೇಕು ಎಂದು ವಾಗ್ದಾಳಿ ನಡೆಸಿದರು.

ಡಿಸ್ನಿಲ್ಯಾಂಡ್‍ಗೆ ಸರ್ಕಾರ 1200 ಕೋಟಿ ರೂ.ಖರ್ಚು ಮಾಡುತ್ತಿದೆ.ಎಲ್ಲಿ ಲಾಭವಿದೆಯೋ ಆ ಬಗ್ಗೆ ಮಾತ್ರ ಸರ್ಕಾರ ವಿಚಾರ ಮಾಡುತ್ತಿದೆ.ಆದರೆ, ಉತ್ತರ ಕರ್ನಾಟಕದ ಬಗ್ಗೆ ಏಕೆ ಈ ನಿರ್ಲಕ್ಷ್ಯ.ಇದು ಶೋಭೆ ತರುವಂಥದ್ದಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ