ಬೆಂಗಳೂರು, ಡಿ.14-ಕಾರು ಚಾಲಕನ ಗಮನವನ್ನು ಬೇರೆಡೆ ಸೆಳೆದು ಲ್ಯಾಪ್ಟಾಪ್ ಹಾಗೂ ದಾಖಲೆ ಅಪಹರಿಸಿ ಪರಾರಿಯಾಗುತ್ತಿದ್ದ ವ್ಯಕ್ತಿಯೊಬ್ಬನನ್ನು ಚಾಲಕನೇ ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ನಡೆದಿದೆ.
ನಿನ್ನೆ ಸಂಜೆ 5.30ರಲ್ಲಿ ಕಾರು ಚಾಲಕ ಚರ್ಚ್ಸ್ಟ್ರೀಟ್ನಲ್ಲಿ ಕಾರು ನಿಲ್ಲಿಸಿಕೊಂಡು ನಿಂತಿದ್ದ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ 10 ರೂ. ನೋಟು ಬೀಳಿಸಿ ಕಾರು ಚಾಲಕನ ಗಮನವನ್ನು ಬೇರೆಡೆ ಸೆಳೆದಿದ್ದಾನೆ. ಆಗ ಕಾರಿನಲ್ಲಿದ್ದ ಲ್ಯಾಪ್ಟಾಪ್ ಹಾಗೂ ದಾಖಲೆಗಳನ್ನು ಅಪಹರಿಸಿ ವ್ಯಕ್ತಿ ಪರಾರಿಯಾಗಲು ಯತ್ನಿಸಿದ.
ತಕ್ಷಣ ಎಚ್ಚೆತ್ತುಕೊಂಡ ಚಾಲಕ ಮತ್ತೊಬ್ಬ ಕಾರು ಚಾಲಕನ ಸಹಾಯದಿಂದ ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಛೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೇ ವೇಳೆ ಈತನೊಂದಿಗಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ.
ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.