ಬೆಂಗಳೂರು,ಡಿ.14- ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಕೋಟ್ಯಾಂತರ ರೂ ಹಗರಣ ನಡೆಸಿದ್ದಾರೆ ಎಂದು ಮಾಜಿ ಪಾಲಿಕೆ ಸದಸ್ಯ ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಈ ಬೃಹತ್ ಹಗರಣ ಸಂಬಂಧ 318 ಪುಟಗಳ ದಾಖಲೆಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಗರದಲ್ಲಿರುವ 189 ಇಂದಿರಾ ಕ್ಯಾಂಟೀನ್‍ಗಳ ಪೈಕಿ ಚೆಫ್‍ಟಾಕ್ ಸಂಸ್ಥೆ 105 ಮತ್ತು ರಿವಾರ್ಡ್ ಸಂಸ್ಥೆ 86 ಕ್ಯಾಂಟೀನ್‍ಗಳನ್ನು ನಿರ್ವಹಿಸುತ್ತಿವೆ. ಇವುಗಳಲ್ಲಿ 15 ಮೊಬೈಲ್ ಕ್ಯಾಂಟೀನ್‍ಗಳು.
ಬೆಳಗಿನ ಒಂದು ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಒಂದು ಊಟಕ್ಕೆ ಗ್ರಾಹಕರಿಂದ 25 ರೂ. ಸಂಗ್ರಹಿಸುವ ಸಂಸ್ಥೆಗಳು, ಸರ್ಕಾರದಿಂದ ಒಂದು ಊಟಕ್ಕೆ 32ರೂ ಸಬ್ಸಿಡಿ ಹಣ ಪಡೆದು ವಂಚಿಸುತ್ತಿವೆ ಎಂದು ದೂರಿದರು.
ಒಂದಕ್ಕೆ ಹತ್ತು ಪಟ್ಟು ಗ್ರಾಹಕರ ಸಂಖ್ಯೆಗಳನ್ನು ತೋರಿಸಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಸಬ್ಸಿಡಿ ಹಣವನ್ನು ಈ ಎರಡೂ ಸಂಸ್ಥೆಗಳು ಲೂಟಿ ಮಾಡುತ್ತಿದೆ ಎಂಬುದನ್ನು ದಾಖಲೆ ಸಹಿತ ವಿವರಿಸಿದರು.
ಈ ಎರಡೂ ಸಂಸ್ಥೆಗಳು ನೀಡುತ್ತಿರುವ ಇಂಡೆಂಟ್‍ಗಳ ದಾಖಲೆಗಳಂತೆ ಪ್ರತೀ ತಿಂಗಳೂ ಗ್ರಾಹಕರಿಂದ ಸಂಗ್ರಹಿಸುತ್ತಿರುವ ಮೊತ್ತ ಸರಾಸರಿ ರೂ.4,69,92,900. ಅಂತೆಯೇ ಎರಡೂ ಸಂಸ್ಥೆಗಳು ಪ್ರತೀ ತಿಂಗಳೂ ಪಾಲಿಕೆಯ ಮೂಲಕ ರಾಜ್ಯ ಸರ್ಕಾರದಿಂದ 6,82,81,373 ರೂ. ಸಬ್ಸಿಡಿ ಹಣ ಪಡೆದಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ.ಜಾರ್ಜ್ ರೂಪಿಸಿದ್ದ ಸಂಚಿನ ಫಲವಾಗಿ ಗುತ್ತಿಗೆ ಪಡೆದಿರುವ ಈ ಎರಡೂ ಸಂಸ್ಥೆಗಳು ಹಗಲು ದರೋಡೆ ನಡೆಸುತ್ತಿವೆ ಎಂದು ಗುಡುಗಿದ್ದಾರೆ.
ಅಷ್ಟೇ ಅಲ್ಲದೇ, ಇಂದಿರಾ ಕ್ಯಾಂಟೀನ್ ಯೋಜನೆಯ ಉಸ್ತುವಾರಿ ಹೊತ್ತಿದ್ದ ಮನೋಜ್ ರಾಜನ್ ಕೂಡ ಈ ಹಗರಣದ ಪ್ರಮುಖ ರೂವಾರಿಯಾಗಿದ್ದಾರೆ. ಎರಡೂ ಸಂಸ್ಥೆಗಳು ನೀಡುತ್ತಿರುವ ಲೆಕ್ಕ ಪತ್ರಗಳನ್ನು ಪರಿಶೀಲನೆ ನಡೆಸದೇ ಕಣ್ಮುಚ್ಚಿ ಭ್ರಷ್ಟಾಚಾರಕ್ಕೆ ಸಾಥ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಮನೋಜ್ ರಾಜನ್ ಒಮ್ಮೆಯೂ ಕ್ಯಾಂಟೀನ್‍ಗಳ ತಪಾಸಣೆ ಮತ್ತು ಪರಿಶೀಲನೆ ನಡೆಸಿಲ್ಲ. ಗ್ರಾಹಕರ ಸಂಖ್ಯೆಗಳನ್ನು ತಾಳೆ ಮಾಡಿಲ್ಲ. ತಮ್ಮ ಕ್ಯಾಂಟೀನ್‍ಗಳ ಟೋಕನ್‍ಗಳನ್ನು ತಾವೇ ಪಡೆದು, ನಕಲಿ ರಶೀದಿಗಳನ್ನು ಸೃಷ್ಟಿಸಿ ಸಬ್ಸಿಡಿ ಹಣ ದೋಚುತ್ತಿದ್ದಾರೆ.ಇದು ಗೊತ್ತಿದ್ದು ಮನೋಜ್ ರಾಜನ್ ಜಾಣ ಮೌನ ವಹಿಸಿದ್ದಾರೆ ಎಂದರು.
ಇನ್ನು ಇಂದಿರಾ ಕ್ಯಾಂಟೀನ್‍ಗಳ ನಿರ್ಮಾಣದಲ್ಲಿಯೂ ಸಹ ಹತ್ತಾರು ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂಬ ಗಂಭೀರ ಆರೋಪವನ್ನು ರಮೇಶ್ ಮಾಡಿದ್ದಾರೆ.
ಇಂದಿರಾ ಕ್ಯಾಂಟೀನ್ ಯೋಜನೆಯ ಪ್ರತಿಯೊಂದು ಅಡುಗೆ ಮನೆ ನಿರ್ಮಾಣಕ್ಕೆ 61 ಲಕ್ಷ ರೂ. ಹಾಗೂ ಕಟ್ಟಡ ನಿರ್ಮಾಣಕ್ಕೆ 28.50 ಲಕ್ಷ ರೂ. ನಿಗದಿಯಾಗಿತ್ತು. 198 ಇಂದಿರಾ ಕ್ಯಾಂಟೀನ್‍ಗಳ ನಿರ್ಮಾಣ ಹಾಗೂ 27 ಅಡುಗೆ ಮನೆಗಳ ನಿರ್ಮಾಣ ಯೋಜನೆಗೆ ಕೆಇಎಫ್ ಇನ್ಫಾಸ್ಟ್ರಕ್ಚರ್ ಕಂಪನಿಗೆ ರೂ. 72,90,00,000 ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಇಂದಿರಾ ಕ್ಯಾಂಟೀನ್ ಅಡುಗೆ ಸಲಕರಣೆಗಳ ವೆಚ್ಚಕ್ಕೆಂದು ರೂ. 14,53,00,000 ಬಿಡುಗಡೆ ಮಾಡಲಾಗಿದೆ.
ಆದರೆ ಕೆಇಎಫ್ ಸಂಸ್ಥೆ ನಿರ್ಮಿಸಿರುವುದು 174 ಕ್ಯಾಂಟೀನ್‍ಗಳು ಮತ್ತು 19 ಅಡುಗೆ ಮನೆ ಮಾತ್ರ. ಇಲ್ಲೂ ಕೂಡ ಸಾಕಷ್ಟು ಹಗರಣ ನಡೆದಿದ್ದು, ಇದೆಲ್ಲವೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಾರ್ಜ್ ಅಣತಿಯಂತೆಯೇ ಆಗಿದೆ ಎಂದರು.
ಇಂದಿರಾ ಕ್ಯಾಂಟೀನ್‍ಗಳಲ್ಲಿ ನಡೆದಿರುವ, ನಡೆಯುತ್ತಿರುವ ಬೃಹತ್ ಹಗರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಮತ್ತು ಸಿಬಿಐ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ರಮೇಶ್ ಒತ್ತಾಯಿಸಿದ್ದಾರೆ.
ಅಷ್ಟೇ ಅಲ್ಲದೇ, ನಿರ್ವಹಣೆಯ ಹೊಣೆ ಹೊತ್ತ ಎರಡು ಸಂಸ್ಥೆಗಳ ಗುತ್ತಿಗೆಯನ್ನು ರದ್ದು ಪಡಿಸಬೇಕು.24 ಕ್ಯಾಂಟೀನ್, 8 ಅಡುಗೆ ಮನೆ ನಿರ್ಮಾಣವಾಗದಿದ್ದರೂ ಹಣ ಪಡೆದಿರುವ ಕೆಇಎಫ್ ಸಂಸ್ಥೆಯಿಂದ ಹಣ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟೊಂದು ಬೃಹತ್ ಮಟ್ಟದ ಅವ್ಯವಹಾರಗಳಿಗೆ ಕಾರಣರಾದ ಕೆ.ಜೆ.ಜಾರ್ಜ್‍ರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಹಾಗೂ ಅವ್ಯವಹಾರ-ಅಕ್ರಮಗಳ ಪರಿಶೀಲನೆಗೆ ತಂಡ ರಚಿಸುವಂತೆಯೂ ಒತ್ತಾಯಿಸಿದ್ದಾರೆ.
ಇದೇ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಹಾರ ಬಯಲು ಮಾಡಲು ಮುಂದಾಗುವಂತೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಮನೋಜ್ ರಾಜನ್ ಹಾಗೂ ಹಗರಣ ನಡೆಸಿರುವ ಸಂಸ್ಥೆಗಳ ವಿರುದ್ಧ ಲೋಕಾಯುಕ್ತ, ಎಸಿಬಿ, ಬಿಎಂಟಿಎಫ್‍ಗಳಲ್ಲಿ ದೂರು ದಾಖಲಿಸಲಾಗಿದ್ದು, ಎಸಿಎಂಎಂನಲ್ಲೂ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ರಮೇಶ್ ತಿಳಿಸಿದ್ದಾರೆ.