ತಾಲ್ಲೂಕ್ ಕೇಂದ್ರಗಳಲ್ಲಿ ಸ್ಥಳೀಯ ಶಾಸಕರಿಂದ ರಾಷ್ಟ್ರ ಧ್ವಜಾರೋಹಣ ಕೇಂದ್ರದ ಗಮನಕ್ಕೆ ತರುವುದಾಗಿ ಹೇಳಿದ ಸಿ.ಎಂ

ಬೆಳಗಾವಿ(ಸುವರ್ಣಸೌಧ), ಡಿ.14- ತಾಲ್ಲೂಕು ಕೇಂದ್ರಗಳಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಸ್ಥಳೀಯ ಶಾಸಕರು ನೆರವೇರಿಸುವ ವಿಚಾರದ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಗೆ ತಿಳಿಸಿದರು.

ಶೂನ್ಯ ವೇಳೆಯಲ್ಲಿ ಶಾಸಕ ನಾಗನಗೌಡ ಕಂದಕೂರ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣವನ್ನು ಯಾರು ನೆರವೇರಿಸಬೇಕು ಎಂಬ ಕೇಂದ್ರ ಸರ್ಕಾರ ನಿಯಮ ಪಾಲಿಸಿದೆ.ಅದರಂತೆ ಈವರೆಗೂ ನಡೆದುಕೊಂಡು ಬರಲಾಗಿದ್ದು, ಸದ್ಯದಲ್ಲೇ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ತಾಲ್ಲೂಕು ಕೇಂದ್ರಗಳಲ್ಲಿ ಶಾಸಕರು ಧ್ವಜಾರೋಹಣ ನೆರವೇರಿಸುವ ವಿಷಯವನ್ನು ಅವರ ಗಮನಕ್ಕೆ ತರಲಾಗುವುದು.ಕೇಂದ್ರ ಸರ್ಕಾರದಿಂದ ಅದಕ್ಕೆ ಅನುಮತಿ ಪಡೆಯುವ ವಿಚಾರವಾಗಿ ಪ್ರಯತ್ನವನ್ನೂ ನಡೆಸಲಾಗುವುದು ಎಂದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ನಾಗನಗೌಡ ಅವರು, ರಾಷ್ಟ್ರ ಧ್ವಜಾರೋಹಣ ವಿಚಾರದಲ್ಲಿ ಶಾಸಕರಿಗೆ ನೋವುಂಟಾಗುತ್ತಿದೆ.ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿಯವರು ಧ್ವಜಾರೋಹಣ ನೆರವೇರಿಸಿದರೆ, ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಧ್ವಜಾರೋಹಣ ಮಾಡುತ್ತಾರೆ. ಆದರೆ, ತಾಲ್ಲೂಕು ಕೇಂದ್ರಗಳಲ್ಲಿ ತಹಸೀಲ್ದಾರ್ ಅವರು ಧ್ವಜಾರೋಹಣ ನೆರವೇರಿಸುತ್ತಿದ್ದು, ಧ್ವಜಾರೋಹಣ ನೆರವೇರಿಸುವ ಅವಕಾಶವನ್ನು ಶಾಸಕರಿಗೆ ಮಾಡಿಕೊಡಿ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ