ಬೆಳಗಾವಿ, ಡಿ.14-ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಸರಕು ಮತ್ತು ಸೇವೆಗಳ ತೆರಿಗೆ ಪದ್ಧತಿಯ ತಿದ್ದುಪಡಿ ಮಸೂದೆ ಇಂದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿತು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಮಸೂದೆ ಬಗ್ಗೆ ವಿವರಣೆ ನೀಡಿ ಚರ್ಚೆಗೆ ನಾಂದಿ ಹಾಡಿದರು.
ಮಸೂದೆ ಮೇಲೆ ಚರ್ಚೆ ಮಾಡಿದ ಬಹುತೇಕ ಶಾಸಕರು ತಿದ್ದುಪಡಿಯನ್ನು ಮುಕ್ತಕಂಠದಿಂದ ಸ್ವಾಗತಿಸಿದರು. ಆದರೆ ಅದರ ಜೊತೆಗೆ ಜಿಎಸ್ಟಿ ಕಾಯ್ದೆ ದೂರದೃಷ್ಟಿ ಯಿಂದ ಕೂಡಿದ್ದು, ಭವಿಷ್ಯದಲ್ಲಿ ಇದರಿಂದ ಬಹಳಷ್ಟು ಅನುಕೂಲಗಳಿವೆ. ಕಾಲಕಾಲಕ್ಕೆ ಇದರಲ್ಲಿ ಸಾಕಷ್ಟು ತಿದ್ದುಪಡಿಗಳಾಗುತ್ತಿವೆ. ಅವುಗಳ ಬಗ್ಗೆ ನಮ್ಮ ಅಧಿಕಾರಿಗಳು ಮಾಹಿತಿ ಹೊಂದಿರಬೇಕು, ಜನರಿಗೂ ಮಾಹಿತಿ ನೀಡುವಂತಿರಬೇಕು ಎಂಬ ಸಲಹೆಯೊಂದಿಗೆ ಜೊತೆಗೆ ಎಪಿಎಂಸಿಗಳಲ್ಲಿ ತೆರಿಗೆ ವಂಚಿಸುವಂತಹ ಘಟನೆಗಳು ನಡೆಯುತ್ತಿವೆ ಅವುಗಳಿಗೆ ಕಡಿವಾಣ ಹಾಕಿ ಎಂದು ತಿಳಿಸಿದರು.
ಸದಸ್ಯರ ಸಲಹೆಗಳನ್ನು ಸ್ವೀಕರಿಸುವುದಾಗಿ ಹೇಳಿದ ಕುಮಾರಸ್ವಾಮಿ ಅವರು, ತೆರಿಗೆ ವಂಚನೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ತಪ್ಪು ಮಾಹಿತಿ ನೀಡಿರುವವರ ವಿರುದ್ಧ ಈವರೆಗೂ 60 ಪ್ರಕರಣಗಳನ್ನು ದಾಖಲಿಸಲಾಗಿದೆ, 8 ಮಂದಿಯನ್ನು ಬಂಧಿಸಲಾಗಿದೆ. ಜಿಎಸ್ಟಿಯಿಂದ ರಾಜ್ಯಕ್ಕೆ ಬರಬೇಕಾಗಿದ್ದ ಆದಾಯದ ಪಾಲಿನಲ್ಲಿ 2017-18ರಲ್ಲಿ ಏಳೂವರೆ ಸಾವಿರ ಕೋಟಿ ರೂ.ಬಂದಿದೆ. ಈ ವರ್ಷ ಸ್ವಲ್ಪ ಕಡಿಮೆಯಾಗಬಹುದೆಂಬ ಅಂದಾಜಿದೆ.ಕರ್ನಾಟಕ ಇತರ ರಾಜ್ಯಗಳಿಗಿಂತಲೂ ತೆರಿಗೆ ವಸೂಲಿಯಲ್ಲಿ ಮುಂದಿದೆ.ಜಿಎಸ್ಟಿ ಕೌನ್ಸಿಲ್ ಸಭೆಯನ್ನು ಸಚಿವ ಕೃಷ್ಣಭೆರೇಗೌಡ ಅವರು ಕಳೆದ ವರ್ಷವೂ ಪ್ರತಿನಿಧಿಸಿದ್ದರೂ, ಈ ವರ್ಷವೂ ಪ್ರತಿನಿಧಿಸುತ್ತಿದ್ದಾರೆ ಎಂದರು.
ಚರ್ಚೆ ಮತ್ತು ಉತ್ತರದ ನಂತರ ಸಭಾಧ್ಯಕ್ಷ ಸ್ಥಾನದಲ್ಲಿದ್ದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಅವರು ವಿಧೇಯಕದ ಅಂಗೀಕಾರ ಪ್ರಕ್ರಿಯೆ ಕೈಗೆತ್ತಿಕೊಂಡರು.ಆಗ ಬಿಜೆಪಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಅರಗ ಜ್ಞಾನೇಂದ್ರ ಮತ್ತಿತರರು ಇದು ಸರ್ವಾನುಮತದಿಂದ ಅಂಗೀಕಾರವಾಗಲಿ, ಮತಕ್ಕೆ ಹಾಕುವುದು ಬೇಡ ಎಂದು ಹೇಳಿದರು.
ಅದಕ್ಕೆ ಸಮ್ಮತಿಸಿದ ಉಪಾಧ್ಯಕ್ಷರು, ಮಸೂದೆ ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಎಂದು ಘೋಷಿಸಿದರು.
ಇದೇ ವೇಳೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ವಿಧೇಯಕದ ಮೇಲೂ ಚರ್ಚೆ ನಡೆದು ಅಂಗೀಕಾರಗೊಂಡಿತು.