ಲಂಚ ತೆಗೆದುಕೊಳ್ಳುವವರನ್ನು ಲಂಚಕೋರ ಎನ್ನಬೇಡಿ ಅವರೆಲ್ಲಾ ಮಹಾನ್ ವ್ಯಕ್ತಿಗಳು : ಸ್ಪೀಕರ್ ರಮೇಶ್‍ಕುಮಾರ್

ಬೆಳಗಾವಿ, ಡಿ.14-ಲಂಚ ಪಡೆಯುವವರನ್ನು ಲಂಚಕೋರರು ಎನ್ನಬೇಡಿ, ಅವರೆಲ್ಲ ಮಹಾನ್ ವ್ಯಕ್ತಿಗಳು. ಅದನ್ನು ಗೌರವಯುತವಾಗಿ ಸಂಭಾವನೆ ಎಂದು ಕರೆಯಿರಿ ಎಂದು ಸ್ಪೀಕರ್‍ರಮೇಶ್ ಕುಮಾರ್ ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿದ ಪ್ರಸಂಗ ನಡೆಯಿತು.

ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಆರ್.ಅಶೋಕ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ ನಿರುದ್ಯೋಗಿ, ಪರಿಶಿಷ್ಟ ಜನಾಂಗದ ಯುವಜನರಿಗೆ ಕಾರು ನೀಡುವ ಯೋಜನೆ ಜಾರಿಗೆ ತಂದಿದೆ. ಆದರೆ ಅದರಲ್ಲಿ ಒಂದು ಲಕ್ಷಕ್ಕೆ 40 ಸಾವಿರ ರೂ. ಲಂಚವನ್ನೇ ಕೊಡಬೇಕು.ಅರ್ಜಿ ಸಲ್ಲಿಕೆಯಿಂದ ಆರಂಭಗೊಂಡು ಚೆಕ್ ವಿತರಣೆವರೆಗೂ ಪರಿಶೀಲನೆ, ತಪಾಸಣೆ, ಮಂಜೂರಾತಿ ಸೇರಿದಂತೆ ನಾನಾ ಕೆಲಸಗಳಿಗೆ 40 ಸಾವಿರದವರೆಗೂ ಲಂಚ ಕೊಡಬೇಕಾಗುತ್ತದೆ.ಫಲಾನುಭವಿಗಳಿಗೆ ಕೊನೆಗೆ ತಲುಪುವುದು ಅರ್ಧಂಬರ್ಧ ಹಣ.ಇದಕ್ಕಾಗಿ ನಿಯಮಾವಳಿಗಳನ್ನು ಸಡಿಲ ಮಾಡಿ ಎಂದರು.

ಇದಕ್ಕೆ ಉತ್ತರ ನೀಡಿದ ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಇದು ಗಂಭೀರ ಆರೋಪ.ನಿರ್ದಿಷ್ಟ ಪ್ರಕರಣಗಳ ಮಾಹಿತಿ ಇದ್ದರೆ ಕೊಡಿ ನಾವು ಕ್ರಮಕೈಗೊಳ್ಳುತ್ತೇವೆ.ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕತೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಇತ್ತೀಚೆಗೆ ಐರಾವತ ಎಂಬ ಯೋಜನೆಯನ್ನು ಪರಿಚಯಿಸಲಾಗಿದೆ.ಅದು ಸಂಪೂರ್ಣ ಪಾರದರ್ಶಕವಾಗಿದೆ ಎಂದು ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಸ್ಪೀಕರ್ ರಮೇಶ್‍ಕುಮಾರ್, ಲಂಚ ಪಡೆಯುವುದನ್ನು ಅಷ್ಟು ಕೆಟ್ಟ ಶಬ್ದದಲ್ಲಿ ಹೇಳಬೇಡಿ. ಗೌರವಯುತವಾಗಿ ಸಂಭಾವನೆ ಎಂದು ಕರೆಯಿರಿ.ಅಂತಹ ಅಧಿಕಾರಿಗಳು ಮಹಾನುಭಾವರು ಎಂದು ಲೇವಡಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ